ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಸಿಎಂ

ಬಿಜೆಪಿ ಮುಖಂಡ ಪಾಲಾಕ್ಷಗೌಡ್ರು ಆರೋಪ

ದಾವಣಗೆರೆ, ಜು. 12- ರೈತಪರ ಯೋಜನೆಗಳನ್ನು ಕೈಬಿಡುವ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷದವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಪಾಲಾಕ್ಷಗೌಡ್ರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು, ವಿದ್ಯುತ್ ಬೆಲೆ ಏರಿಕೆ, ರೈತ ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ಭೂ ಸಿರಿ ಯೋಜನೆ, ಕಿಸಾನ್
ಸಮ್ಮಾನ್ ನಿಧಿ ಯೋಜನೆ, ರೈತ ಶಕ್ತಿ ಯೋಜನೆಗಳನ್ನು ಕೈಬಿಡುವ ಮೂಲಕ ರೈತ ವಿರೋಧಿ ಧೋರಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ ಎಂದರು.

ಬಿಜೆಪಿ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ 23 ಸಾವಿರ ಕೋಟಿ ಅನುದಾನ ಒದಗಿಸಿದ್ದು, ಅದನ್ನು ಈಗ 19 ಸಾವಿರ ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿದ್ದು ಕೇವಲ ರಾಜಕೀಯ ಗಿಮಿಕ್‌ಗಾಗಿ ಎಂಬುದನ್ನು ನಿರೂಪಿಸಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿನ ಮಹತ್ತರ ಯೋಜನೆಗಳನ್ನು ಕೈಬಿಡುವ ಜೊತೆಗೆ ಮಠ ಮಾನ್ಯಗಳಿಗೂ ಅನುದಾನ ಕೈಬಿಟ್ಟಿದೆ. ಗೋ ಮಸೂದೆಯನ್ನು ಹಿಂಪಡೆಯುವ ಹುನ್ನಾರ ಕೂಡ ನಡೆಯುತ್ತಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಮುಖಂಡರಾದ ಬಾತಿ ಶಿವಕುಮಾರ್, ಅಣಜಿ ಗುಡ್ಡೇಶ್, ಶಿವಪ್ರಕಾಶ್ ಉಪಸ್ಥಿತರಿದ್ದರು. 

error: Content is protected !!