ದಾವಣಗೆರೆ, ಜು. 6 – ಅಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಆಷಾಢ ಮಾಸ ಹಾಗೂ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ‘ಸಿಲ್ಕ್ ಇಂಡಿಯ-2023’ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್, ಉಪ ಆಯುಕ್ತರಾದ ಶ್ರೀಮತಿ ಲಕ್ಷ್ಮಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಅವರುಗಳು ಸಂಯುಕ್ತವಾಗಿ ಚಾಲನೆ ನೀಡಿದರು.
ಅಭಿವೃದ್ಧಿ ಸಂಸ್ಥೆಯ ಸಿಇಒ ಅಭಿನಂದನ್, ಕಾನಿಪ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ಹಾಗೂ ಇತರರು ಉಪಸ್ಥಿತರಿದ್ದರು.
ಇಂದಿನಿಂದ ಆರಂಭವಾಗಿರುವ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಇದೇ ದಿನಾಂಕ 11 ರವರೆಗೆ ಇರುತ್ತದೆ. ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 60 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿವೆ ಎಂದು ಸಿಇಒ ಅಭಿನಂದನ್ ತಿಳಿಸಿದ್ದಾರೆ.