ಭದ್ರಾ ಜಲಾಶಯ ನೀರಿನ ಮಟ್ಟ ಇಳಿಕೆ

ಶಿವಮೊಗ್ಗ, ಜು. 3 – ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯಕ್ಕೆ ಒಳ ಹರಿವು ಇಲ್ಲದ ಕಾರಣ ನೀರಿನ ಮಟ್ಟ 136 ಅಡಿ 10 ಇಂಚಿಗೆ ಇಳಿಕೆ ಕಂಡಿದೆ. ಇದರಿಂದಾಗಿ ಡ್ಯಾಂ ಖಾಲಿಯಾಗಿ ಕಾಣುತ್ತಿದೆ. ಮಲೆನಾಡಿನಲ್ಲಿ ಮಳೆ ಜೋರಾಗಿ ಸುರಿಯದ ಕಾರಣ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಮತ್ತು ಇದುವರೆಗೂ ಒಳಹರಿವು ಬಾರದಿರುವುದಕ್ಕೆ ಅಚ್ಚುಕಟ್ಟಿನ ರೈತರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 154 ಅಡಿ 3 ಇಂಚು ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡ್ಯಾಂನಲ್ಲಿ 17 ಅಡಿ ನೀರು ಕಡಿಮೆ ಇದೆ. ಜಲಾಶಯದ ಇತಿಹಾಸದಲ್ಲಿ ಆಗಸ್ಟ್ ತಿಂಗಳಲ್ಲೇ ಹೆಚ್ಚು ಮಳೆ ಸುರಿದು ಡ್ಯಾಂ ಭರ್ತಿಯಾಗಿರುವ ಉದಾಹರಣೆಗಳು ಇದ್ದು ರೈತರು ಆತಂಕ ಪಡಬೇಕಾಗಿಲ್ಲ ಎಂದು ಅನುಭವಿಗಳು ಹೇಳಿದ್ದಾರೆ.

error: Content is protected !!