ಹೊಳಲ್ಕೆರೆ, ಜು. 30- ಕಳೆದ ವಾರ ಮೃತಪಟ್ಟಿದ್ದ ಸನ್ಯಾಸಿಯೊಬ್ಬರ ಮನೆಯಲ್ಲಿ 30 ಲಕ್ಷ ರೂ.ಗೂ ಅಧಿಕ ಹಣ ಪತ್ತೆಯಾಗಿದೆ.
ನಂದೀಶ್ವರ ಮಠದ ಅನುಯಾಯಿಯಾಗಿದ್ದ ಗಂಗಾಧರಯ್ಯ ಶಾಸ್ತ್ರಿ ನಿವಾಸದಲ್ಲಿ ನೋಟು ತುಂಬಿದ ಹಲವು ಚೀಲಗಳು, ಹಣ ತುಂಬಿದ ಕೊಡವೊಂದು ಸಿಕ್ಕಿದೆ. ಒಂಟಿಯಾಗಿ ಬದುಕು ನಡೆಸುತ್ತಿದ್ದ ಈ ಸನ್ಯಾಸಿ, ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಇವರಿಗೆ 16 ಎಕರೆ ಜಮೀನಿದ್ದು, 4 ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಕೃಷಿ, ಮತ್ತಿತರೆ ಆದಾಯದಿಂದ ಬಂದ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನು ಮನೆಯಲ್ಲಿ ಕೂಡಿಟ್ಟಿದ್ದರು. 10 ರೂ., 20 ರೂ., 50 ರೂ., 100 ರೂ., 200 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಸನ್ಯಾಸಿಯ ಮನೆಯಲ್ಲಿ ಸಿಕ್ಕಿವೆ. ಗಂಗಾಧರಯ್ಯ ಶಾಸ್ತ್ರಿ ಮನೆಯಲ್ಲಿ ತೆಂಗಿನಕಾಯಿ ರಾಶಿ ಕೆಳಗಡೆ ಹಾಗೂ ಅಟ್ಟದ ಮೇಲೆ ಹಣ ಪತ್ತೆಯಾಗಿದೆ.
ಗಂಗಾಧರಯ್ಯ ಅವರು ತೆಂಗಿನ ತೋಟದಿಂದ ಬಂದ ಆದಾಯ ಹಾಗೂ ಭಕ್ತರು ನೀಡಿದ ಕಾಣಿಕೆಯನ್ನು ಹಲವು ವರ್ಷಗಳಿಂದ ಮನೆಯಲ್ಲಿಯೇ ಸಂಗ್ರಹಿಸಿಟ್ಟಿದ್ದರು ಎಂದು ಹೇಳಲಾಗಿದೆ. ಅವರಿಗೆ ವಾರಸುದಾರರಿಲ್ಲದ ಕಾರಣ, ಮುಂದಿನ ಶುಕ್ರವಾರ ಅಂದರೆ ಜುಲೈ 7ರಂದು ಭಕ್ತರ ಸಭೆ ಕರೆದು ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಗಂಗಾಧರಯ್ಯ ಅವರ ಜಮೀನಿನಲ್ಲಿ ಗದ್ದುಗೆ ನಿರ್ಮಿಸಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿಸಲಾಗಿದೆ. ಉಳಿದ ಹಣವನ್ನು ಟ್ರಸ್ಟ್ ರಚಿಸಿ ಸಮಾಜಸೇವೆಗೆ ಬಳಸಲು ಭಕ್ತರು ಮುಂದಾಗಿದ್ದಾರೆ.