ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆ ನಿರ್ಧಾರಕ್ಕೆ ಆಕ್ಷೇಪ

ದಾವಣಗೆರೆ, ಜೂ. 26- ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ ಯನ್ನು ಏಕಾಏಕಿ ಹಿಂಪಡೆದಿರುವುದು ಮುಂದಿನ ದಿನಗಳಲ್ಲಿ ರೈತರಿಗೆ ಮರಣ ಶಾಸನವಾಗಲಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುವಾಗ, ಎಪಿಎಂಸಿಗಳಿಂದ ಮಾರುಕಟ್ಟೆ ಶುಲ್ಕದ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಆದಾಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಎಪಿಎಂಸಿ ಪ್ರಾಂಗಣಕ್ಕೆ ಬರುವ ರೈತರ ಸಂಖ್ಯೆ ಕಡಿಮೆಯಾಗಿದ್ದು, ಇದರಿಂದ ವರ್ತಕರ ಮತ್ತು ಹಮಾಲರ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಆದ್ದರಿಂದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುತ್ತಿದ್ದೇವೆ ಎಂದು ಹೇಳಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸತೀಶ್ ಪ್ರಶ್ನಿಸಿದರು. ಇವರ ಹೇಳಿಕೆಯನ್ನು ಗಂಭೀರವಾಗಿ ಗಮನಿಸಿದಾಗ ರೈತರ ಹಿತಾಸಕ್ತಿಗಿಂತ ಎಪಿಎಂಸಿ ಯಿಂದ ಬರುವ ಆದಾಯ ಮತ್ತು ವರ್ತಕರ, ಹಮಾಲರ ಹಿತಾಸಕ್ತಿ ಮುಖ್ಯವಾಗಿದೆ ಎಂದು ತಿಳಿದು ಬರುತ್ತದೆ. ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟ ಮಾಡಲು ಬರುವ ರೈತರಿಗೆ ಆಗುತ್ತಿದ್ದ ಅನ್ಯಾಯ, ಅಕ್ರಮ, ಶೋಷಣೆ ತಪ್ಪಿಸುವ ಉದ್ದೇಶದಿಂದ ರೈತರು ಎಲ್ಲಿಬೇಕಾದರೂ, ಯಾರಿಗೆ ಬೇಕಾದರೂ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಇದರಿಂದ ರೈತರು ಬೆಳೆದ  ಉತ್ಪನ್ನಗಳನ್ನು ಜಮೀನಿನಲ್ಲಿ ಅಥವಾ ತಮ್ಮ ಮನೆ ಅಂಗಳದಲ್ಲಿ ದಾಸ್ತಾನು ಮಾಡಿ , ಮಾರಾಟ ಮಾಡುತ್ತಿದ್ದರು. ರೈತರು ತಮ್ಮ ಜಮೀನು ಬಳಿ ಅಥವಾ ತಮ್ಮ ಮನೆ ಅಂಗಳದಲ್ಲಿ ದಾಸ್ತಾನು ಮಾಡಿದ ರಾಶಿ ಧಾನ್ಯಕ್ಕೆ ಉತ್ತಮ ಬೆಲೆ ಸಿಗದಿದ್ದರೆ ಮಾರಾಟ ಮಾಡಲು ನಿರಾಕರಿಸಿ, ಸ್ಪಲ್ಪ ದಿನಗಳವರೆಗೆ ಕಾಯುತ್ತಾರೆ ಎಂದು ಹೇಳಿದರು.

ಎಪಿಎಂಸಿಗೆ ತಂದರೆ ಚೀಲಕ್ಕೆ ತುಂಬಿ ವಾಹನ ಸಾಗಾಟ, ಹಮಾಲಿ ಖರ್ಚು ರೈತನಿಗೆ ತಗಲುತ್ತದೆ. ಅಂದು ಎಪಿಎಂಸಿಯಲ್ಲಿ ಉತ್ತಮ ಬೆಲೆ ಸಿಗದಿದ್ದರೆ ಅಲ್ಲಿ ದಾಸ್ತಾನು ಮಾಡುವ ಅನುಕೂಲತೆ ಇರುವುದಿಲ್ಲ. ಸುರಕ್ಷತೆ ಖಾತ್ರಿ ಇರುವುದಿಲ್ಲ. ಲೋಡ್ ಮಾಡಿಕೊಂಡು ಹಿಂತಿರುಗಿ ತೆಗೆದುಕೊಂಡು ಹೋಗಲು ಆಗದೇ, ದಲಾಲರು, ಖರೀದಿದಾರರು ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಿ ಹೋಗುವ ಅಸಹಾಯಕ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ದಾವಣಗೆರೆ ತಾಲ್ಲೂಕಿನಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಸುಮಾರು 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. 109250 ಮೆಟ್ರಿಕ್ ಟನ್ ಭತ್ತದ ಉತ್ಪಾದನೆಯಾಗಿದೆ. ಇದರಲ್ಲಿ ಕೇವಲ 8803 ಮೆಟ್ರಿಕ್ ಟನ್ ಭತ್ತ ದಾವಣಗೆರೆ ಎಪಿಎಂಸಿಯಲ್ಲಿ ಮಾರಾಟವಾಗಿದೆ. ತಾಲ್ಲೂಕಿನ ಭತ್ತದ ಒಟ್ಟು ಉತ್ಪಾದನೆಯಲ್ಲಿ ಕೇವಲ ಶೇ. 8 ರಷ್ಟು ಮಾತ್ರ ಎಪಿಎಂಸಿಯಲ್ಲಿ ಮಾರಾಟವಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ. ನಾಗೇಶ್ವರರಾವ್, ಜೀವನ ಪ್ರಕಾಶ್, ಹೆಚ್.ಜಿ. ಗಣೇಶಪ್ಪ ಕುಂದುವಾಡ, ಹೆಚ್. ಹಾಲಪ್ಪ ಹೂವಿನಮಡು ಉಪಸ್ಥಿತರಿದ್ದರು. 

error: Content is protected !!