ದಾವಣಗೆರೆ, ಜೂ. 25- ಅಂತರ್ ರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ದಾವಣಗೆರೆ ವತಿಯಿಂದ ದ್ವಿತೀಯ ಬಾರಿಗೆ ಶ್ರೀ ಜಗನ್ನಾಥ ರಥ ಯಾತ್ರೆ ಮಹಾ ಮಹೋತ್ಸವ ನಾಡಿದ್ದು ದಿನಾಂಕ 27ರ ಮಂಗಳವಾರ ನಡೆಯ ಲಿದೆ ಎಂದು ಇಸ್ಕಾನ್ ಮುಖ್ಯಸ್ಥ ಅವ ಧೂತ ಚಂದ್ರದಾಸ ಅವರು ಹೇಳಿದರು.
ನಗರದ ಇಸ್ಕಾನ್ ಸಭಾಂಗಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 7 ಗಂಟೆಗೆಯಿಂದ ಶ್ರೀ ನರಸಿಂಹ ಯಜ್ಞ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ನಡೆಯಲಿದ್ದು, 2 ಗಂಟೆಗೆ ಮಹೋತ್ಸವದ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು.
ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನ ದಿಂದ 2 ಗಂಟೆಯಿಂದ ರಥಯಾತ್ರೆ ಆರಂಭವಾಗಲಿದ್ದು, ಚಾಮರಾಜಪೇಟೆ ರಸ್ತೆ, ಹಾಸಬಾವಿ ವೃತ್ತ, ಚೌಕಿಪೇಟೆ, ಹೊಂಡದ ಸರ್ಕಲ್, ಅರುಣ ಸರ್ಕಲ್, ಆರ್.ಹೆಚ್. ಛತ್ರ, ಜಯದೇವ ವೃತ್ತ, ವಿದ್ಯಾರ್ಥಿ ಭವನ ದಿಂದ ಗುಂಡಿ ವೃತ್ತ ತಲುಪಿ, ಶ್ರೀ ಗುಂಡಿ ಮಹಾ ದೇವಪ್ಪ ಕಲ್ಯಾಣ ಮಂಟಪದಲ್ಲಿ ಸಂಜೆ 5 ಗಂಟೆಯಿಂದ ಶ್ರೀ ಜಗನ್ನಾಥ ಮಹಾಮಂಗ ಳಾರತಿ ನಂತರ ನೃತ್ಯ, ನಾಟಕ, ಗುರುಗಳಿಂದ ಆಶೀರ್ವಚನ, ಪ್ರಸಾದ ವ್ಯವಸ್ಥೆ ಇರುವುದಾಗಿ ಹೇಳಿದರು. ರಥೋತ್ಸವದ ಉದ್ಘಾಟನೆಗೆ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳನ್ನು ಆಹ್ವಾನಿಸಲಾಗಿದೆ. ಕಳೆದ ಬಾರಿ ಪ್ರಥಮ ರಥಯಾತ್ರೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿತ್ತು. ಈ ಬಾರಿಯೂ ಸಹ ನಾಗರಿಕರು ರಥಯಾತ್ರೆಗೆ ಆಗಮಿಸಿ ಸ್ವಾಮಿಯ, ಕೃಪೆಗೆ ಪಾತ್ರರಾಗುವಂತೆ ಕೋರಿದರು.
ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ರಥಯಾತ್ರೆಯ ವೇಳೆ ಹಸು, ಒಂಟೆ ಸೇರಿದಂತೆ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಸಂಕೀರ್ತನಾ ತಂಡಗಳು ಇರಲಿವೆ ಎಂದು ಮಾಹಿತಿ ನೀಡಿದರು.