ಮುಸ್ಲಿಮರ ಓಲೈಕೆಗಾಗಿ ಪಠ್ಯ ಪರಿಷ್ಕರಣೆ

ಮುಸ್ಲಿಮರ ಓಲೈಕೆಗಾಗಿ ಪಠ್ಯ ಪರಿಷ್ಕರಣೆ

ದಾವಣಗೆರೆ, ಜೂ. 22 – ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಮರನ್ನು ಓಲೈಸುವ ಸಲುವಾಗಿ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆರೋಪಿಸಿದ್ದಾರೆ.

ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಠ್ಯದಿಂದ ಸ್ವಾಮಿ ವಿವೇಕಾನಂದ ಕುರಿತ ಪಾಠ ತೆಗೆದು ಹಾಕಲಾಗಿದೆ. ರಾಮಾಯಣದ ಅಂಶ ಇರುವ ಕಾರಣ ಕುವೆಂಪು ಪಾಠ ತೆಗೆದಿದ್ದಾರೆ. ಭಗವದ್ಗೀತೆ ವಿಷಯ ಇದೆ ಎಂಬ ಕಾರಣಕ್ಕೆ ಮಹಾತ್ಮ ಗಾಂಧೀಜಿ ಉಪವಾಸ ಸತ್ಯಾಗ್ರಹದ ಪಾಠ ತೆಗೆದಿದ್ದಾರೆ ಎಂದು ಟೀಕಿಸಿದರು. ಆರ್.ಎಸ್.ಎಸ್. ಸ್ಥಾಪಕ ಕೇಶವ ಹೆಡ್ಗೇವಾರ್‌ ಅವರ ಪಾಠವನ್ನು ತೆಗೆಯಲಾಗಿದೆ. ಈ ಪಾಠವನ್ನು ಓದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಾನ್ಯಾಕೆ ಓದಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೆಲ್ಲವನ್ನು ನೋಡಿದಾಗ ಮುಸ್ಲಿಮರ ಓಲೈಕೆ ದೃಷ್ಟಿಯಿಂದ ಪಠ್ಯ ಪರಿಷ್ಕರಣೆ ಮಾಡಿರುವುದು ಗೊತ್ತಾಗುತ್ತದೆ ಎಂದು ನಾಗೇಶ್‌ ಹೇಳಿದರು.

ಪಠ್ಯ ಪರಿಷ್ಕರಣೆಗೆ ಆಕ್ಷೇಪವಿಲ್ಲ. ಆದರೆ, ಇದಕ್ಕೆ ಸರಿಯಾದ ಕ್ರಮ ಪಾಲಿಸಬೇಕಿತ್ತು. ಮೊದಲು ವಿಷಯ ಜನರ ಮುಂದಿಡಬೇಕಿತ್ತು. ಪರಿಣಿತರ ಸಮಿತಿ ಮೂಲಕ ಪರಿಶೀಲಿಸಬೇಕಿತ್ತು. ಶಿಕ್ಷಕರು, ತಜ್ಞರು ಹಾಗೂ ಪೋಷಕರ ಜೊತೆ ಚರ್ಚಿಸಬೇಕಿತ್ತು ಎಂದರು.

ಇದಾವುದನ್ನೂ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದಾರೆ. ನಂತರ ನೇರವಾಗಿ ಪಠ್ಯ ಪರಿಷ್ಕರಣೆಯನ್ನು ಸಂಪುಟಕ್ಕೆ ಕಳಿಸಲಾಗಿದೆ. ಕೆಲವು ನಿರುದ್ಯೋಗಿ ಬುದ್ಧಿಜೀವಿಗಳನ್ನು ತೃಪ್ತಿಪಡಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದರು.

ಮಕ್ಕಳ ಕಲಿಕೆ ಉತ್ತಮ ಪಡಿಸಲು ಕಲಿಕಾ ಚೇತರಿಕೆ ಜಾರಿಗೆ ತರಲಾಗಿತ್ತು. ಆದರೆ, ಈ ಸರ್ಕಾರ ಅದನ್ನು ರದ್ದುಗೊಳಿಸಿದೆ. ಮಕ್ಕಳಿಗೆ ನೀಡಲಾಗುತ್ತಿದ್ದ ಕೋಳಿ ಮೊಟ್ಟೆ ಪ್ರಮಾಣ ಕಡಿತಗೊಳಿಸಲಾಗಿದೆ. ಇವರಿಗೆ ಮಕ್ಕಳ ಕಲಿಕೆ ಹಾಗೂ ಪೌಷ್ಠಿಕತೆಯ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿಯನ್ನು ರದ್ದುಗೊಳಿಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಆಡಳಿತಾರೂಢ ಸಚಿವರು ಹಾಗೂ ಶಾಸಕರು ಸಿ.ಬಿ.ಎಸ್.ಇ. ಶಾಲೆಗಳನ್ನು ನಡೆಸುತ್ತಿದ್ದು, ಅಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿಯೇ ಮುಂದುವರೆಯಲಿದೆ. ಬಡ ಮಕ್ಕಳನ್ನು ಈ ಪದ್ಧತಿಯಿಂದ ದೂರ ಮಾಡಲು ಹುನ್ನಾರ ನಡೆಸಲಾಗುತ್ತಿದೆ ಎಂದು ನಾಗೇಶ್‌ ಆರೋಪಿಸಿದರು.

error: Content is protected !!