ದಾವಣಗೆರೆ, ಜೂ. 12- ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ 93 ನೇ ಜನ್ಮ ದಿನಾಚರಣೆ ಅಂಗವಾಗಿ ಇದೇ ದಿನಾಂಕ 16 ರಂದು ಜಿಲ್ಲಾ ಕಾಂಗ್ರೆಸ್ ಹಾಗೂ ಎಸ್ಸೆಸ್ ಅಭಿಮಾನಿಗಳ ವತಿಯಿಂದ ನಗರದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಸ್ಸೆಸ್ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಅನಾಥಾಶ್ರಮ, ವೃದ್ಧಾಶ್ರಮದ ವಾಸಿಗಳಿಗೆ ನಿತ್ಯ ಬಳಕೆ ವಸ್ತುಗಳು ಹಾಗೂ ವಿಕಲಚೇತನ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಗುವುದು ಎಂದರು.
ಗೋಶಾಲೆಯ ಗೋವುಗಳಿಗೆ ಮೇವು ವಿತರಣೆ, ನಿರಾಶ್ರಿತ ಕೇಂದ್ರಗಳಲ್ಲಿ ವಾಸಿಸುವ ವರಿಗೆ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರದ ಎಸ್ಸೆಸ್ ಅಭಿಮಾನಿಗಳು ಆಯಾ ವಾರ್ಡ್‌ಗಳಲ್ಲು ಕೂಡ ವಿವಿಧ ಸೇವಾ ಕಾರ್ಯ ಕ್ರಮಗಳನ್ನು ಆಯೋಜಿಸಿಕೊಂಡಿದ್ದಾರೆಂದು ಹೇಳಿದರು.
ವಿಶೇಷ ಕಾರ್ಯಕ್ರಮ: ಎಸ್ಸೆಸ್ ಅವರ 93 ನೇ ಜನ್ಮ ದಿನದ ಪ್ರಯುಕ್ತ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 93 ಜನ ಹಿರಿಯರು, ಮಹಿಳೆಯರು ಹಾಗೂ ಪಕ್ಷದ ಕಾಂಗ್ರೆಸ್ ಮುಖಂಡರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗಡಿಗುಡಾಳ್ ಮಂಜುನಾಥ್, ಎಸ್. ಮಲ್ಲಿಕಾರ್ಜುನ್, ಶ್ರೀಕಾಂತ್ ಬಗರೆ, ರಾಜು ಭಂಡಾರಿ, ಮಹಿಳಾ ಮುಖಂಡರಾದ ದಾಕ್ಷಾಯಣಮ್ಮ, ಕವಿತಾ ಚಂದ್ರಶೇಖರ್, ಶುಭಮಂಗಳ, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.