ದಾವಣಗೆರೆ,ಜೂ.9- ದಾವಣಗೆರೆ ಜಿಲ್ಲಾ ಕೇಂದ್ರ ಸಹ ಕಾರ ಸಗಟು ಮಾರಾಟ ಮಳಿಗೆ (ಜನತಾ ಬಜಾರ್) ಆಡಳಿತ ಮಂಡಳಿ ನಿರ್ದೇಶಕರುಗಳಾಗಿ ಎಂ.ಕೆ. ಹೊನ್ನೇಶ್ ಮತ್ತು ಶ್ರೀಮತಿ ಬಿ.ಸಿ.ಶೀಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜನತಾ ಬಜಾರ್ ಆಡಳಿತ ಮಂಡಳಿಯಲ್ಲಿ ತೆರವಾಗಿದ್ದ ಎರಡು ಸ್ಥಾನಗಳಿಗೆ `ಎ’ ತರಗತಿ ಸದಸ್ಯ ಸ್ಥಾನದಿಂದ ಎಂ.ಕೆ. ಹೊನ್ನೇಶ್ ಹಾಗೂ `ಸಿ’ ತರಗತಿ ಮಹಿಳಾ ಸದಸ್ಯ ಸ್ಥಾನದಿಂದ ಶ್ರೀಮತಿ ಬಿ.ಸಿ. ಶೀಲಾ ಚುನಾಯಿತಗೊಂಡಿದ್ದಾರೆ.
ಸಹಕಾರಿ ಧುರೀಣರಾಗಿದ್ದ ಬಿ.ವಿ. ಚಂದ್ರಶೇಖರ್ ಅವರ ನಿಧನದಿಂದಾಗಿ ಮತ್ತು ನಿರ್ದೇಶಕರೊಬ್ಬರು ನೀಡಿದ್ದ ರಾಜೀನಾಮೆಯಿಂದಾಗಿ ತೆರವಾಗಿದ್ದ ಎರಡು ಸ್ಥಾನಗಳಿಗೆ ಇದೇ ದಿನಾಂಕ 14ರಂದು ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಉಮೇದುವಾರಿಕೆ ಅರ್ಜಿಯನ್ನು ಹೊನ್ನೇಶ್ ಮತ್ತು ಶೀಲಾ ಮಾತ್ರ ಸಲ್ಲಿಸಿದ್ದ ಕಾರಣದಿಂದಾಗಿ ಅವರಿಬ್ಬರ ಆಯ್ಕೆ ಅವಿರೋಧವಾಗಿ ನಡೆಯಿತು.
ತೆರವಾಗಿದ್ದ ಬಿವಿಸಿ ಸ್ಥಾನಕ್ಕೆ ಅವರ ಹಿರಿಯ ಪುತ್ರಿ ಬಿ.ಸಿ ಶೀಲಾ ಹಾಗೂ ಮತ್ತೊಂದು ಸ್ಥಾನಕ್ಕೆ ಬಿವಿಸಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹೊನ್ನೇಶ್ ಆಯ್ಕೆಯಾಗಿದ್ದಾರೆ.