ಜಗದ ಜನರ ದುಃಖ ನಿವಾರಣೆಗೆ ನಿರಂತರ ಜೀವಿಸಿದ ಜಿದ್ದು ಕೃಷ್ಣಮೂರ್ತಿ

ಜಗದ ಜನರ ದುಃಖ ನಿವಾರಣೆಗೆ ನಿರಂತರ ಜೀವಿಸಿದ ಜಿದ್ದು ಕೃಷ್ಣಮೂರ್ತಿ - Janathavaniದಾವಣಗೆರೆ, ಜೂ. 7- 20ನೇ ಶತಮಾನದ ದಾರ್ಶನಿಕ ಚಿಂತಕ ಜಿದ್ದು ಕೃಷ್ಣಮೂರ್ತಿಯವರು ಸುಮಾರು 65 ವರ್ಷಗಳ ಕಾಲ ಜಗತ್ತಿನಾದ್ಯಂತ ಪ್ರವಾಸ ಮಾಡಿ ಜನರ ಮಾನಸಿಕ ದುಃಖ ನಿವಾರಣೆಗಾಗಿ ಪ್ರಾಯೋಗಿಕ ಮತ್ತು ಹಿಂದೆ ಕೇಳರಿಯದ ಅತ್ಯುಪಯುಕ್ತ ಚಿಂತನೆಗಳನ್ನು ವಿಶ್ವಕ್ಕೆ ನೀಡಿದ್ದಾರೆ. ದೈಹಿಕವಾಗಿ ಎಂತಹ ಭೀಕರ ಕಾಯಿಲೆ ಬಂದರೂ ಈಗಿನ ತಾಂತ್ರಿಕ ಪ್ರಗತಿಯಿಂ ದಾಗಿ ಅವುಗಳನ್ನೆಲ್ಲಾ ನಿವಾರಣೆ ಮಾಡಿಕೊಳ್ಳಬಹುದು. ಆದರೆ, ಮಾನಸಿಕ ಕಾಯಿಲೆಗಳಾದ ದ್ವೇಷ, ಅಹಂ ಕಾರ, ಅಸೂಯೆ, ಭ್ರಮೆಗಳು ದುರಾಸೆ ಮುಂತಾದವು ಗಳನ್ನು ಯಾರೂ ನಿವಾರಣೆ ಮಾಡಲಾಗುವುದಿಲ್ಲ. ಸ್ವತಃ ನಮ್ಮನ್ನು ನಾವು ಅರಿಯುವುದರ ಮೂಲಕ ಮತ್ತು ಅವು ಉಂಟು ಮಾಡುವ ದುಷ್ಪರಿಣಾಮಗಳ ಅರಿವಿನಿಂದ ನಮ್ಮನ್ನು ನಾವೇ ಸರಿಪಡಿಸಿಕೊಳ್ಳಬೇಕು ಎಂದು ಶಿವನಕೆರೆ ಬಸವಲಿಂಗಪ್ಪ ತಿಳಿಸಿದರು.

ಅವರು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಲ್ಲಿ ನಡೆದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಜೆ.ಕೆ.ಯವರು ನಿಮಗೆ ನೀವೇ ಗುರು ಎಂದಿದ್ದಾರೆ. ಯಾವ ಜಗದ್ಗುರು, ಯಾವ ಸಂಪದ್ರಾಯಗಳು, ಯಾವ ಪುಸ್ತಕಗಳನ್ನೂ ನಂಬಬೇಡಿ. ಸ್ವತಃ ನನ್ನ ಚಿಂತನೆಗಳನ್ನೂ ಸಹ ಪ್ರಶ್ನೆ ಮಾಡದೆ ಒಪ್ಪಬೇಡಿ ಮತ್ತು ಪ್ರಯೋಗ ಮಾಡಿ ಸರಿ ಎನಿಸಿದರೆ ಮಾತ್ರ ನೀವೂ ಅಳವಡಿಸಿಕೊಳ್ಳಿ ಎಂದಿದ್ದಾರೆ. ನಮ್ಮ ದುಃಖವೇನು ಎಂದು ಪತ್ತೆ ಹಚ್ಚಿದರೆ ಅದಕ್ಕೆ ಪರಿಹಾರವೇನು ಎಂದು ನಾವೇ ತಿಳಿಯಬಹುದು.

ಜೆ.ಕೆಯವರು ಯುವ ಮನಸ್ಸುಗಳು ಜಾಗತಿಕ ಸತ್ ಚಿಂತನೆಯ ನಾಯಕರಾಗಿ  ಸದಾಲೋಚನೆ, ಸತ್ಕಾರ್ಯಗಳನ್ನು ಹರಿಬಿಡಲೆಂದು ಪ್ರಪಂಚದಾದ್ಯಂತ ಶಾಲೆ, ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದರು. ತಾಂತ್ರಿಕವಾಗಿ ಮನುಷ್ಯ ಮುಂದುವರೆದಿದ್ದಾನೆಯೇ ಹೊರತು, ಪ್ರೀತಿ, ಕರುಣೆ, ಮೈತ್ರಿಯ ವಿಷಯಗಳಲ್ಲಿ ಸಾವಿರ ವರ್ಷದ ಹಿಂದೆ ಹೇಗಿದ್ದಾನೋ ಹಾಗೆಯೇ ಇದ್ದಾನೆ. ಮಾನಸಿಕವಾಗಿ ಏನೂ ಪ್ರಗತಿ ಸಾಧಿಸಿಲ್ಲ. ಜಗತ್ತಿನಾದ್ಯಂತ ಅರಿವೇ ಗುರು ಎಂದರಿಯದ ಕೋಟಿ ಕೋಟಿ ಜನ ದುಃಖದ ಅಗಾಧವಾದ ಭಾರ ಹೊತ್ತು ತಿರುಗುತ್ತಿದ್ದಾರೆ. ಆದ್ದರಿಂದ ಮನುಜರೆಲ್ಲರೂ ಜೆ.ಕೆ. ಯವರ ಚಿಂತನೆಗಳನ್ನು ಅರಿತು, ದುಃಖ ನಿವಾರಣೆ ಮಾಡಿಕೊಳ್ಳಬೇಕು ಎಂದು ಬಸವಲಿಂಗಪ್ಪನವರು ತಿಳಿಸಿದರು.  

ಮಲ್ಲಾಬಾದಿ ಬಸವರಾಜ್ ಮಾತನಾಡಿ, ನಾವುಗಳು ಒಬ್ಬರ ಮೇಲೊಬ್ಬರು ಹೋಲಿಸಿಕೊಂಡು, ಹೊಟ್ಟೆಕಿಚ್ಚು ಪಟ್ಟುಕೊಂಡು, ಸ್ಪರ್ಧೆಗಿಳಿದು ಅಶಾಂತಿಯ ಸಮಾಜ ನಿರ್ಮಾಣ ಮಾಡುತ್ತಿದ್ದೇವೆ. ಈ ರೋಗಗಳಿಗೆಲ್ಲ ಜೆ.ಕೆ ಯವರ ಚಿಂತನೆಗಳಲ್ಲಿ ಪರಿಹಾರಗಳಿವೆ ಎಂದರು.

error: Content is protected !!