ಲಂಚ ಹಾವಳಿಗೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ತರಾಟೆ
ದಾವಣಗೆರೆ, ಜೂ.4 – ಕಳಪೆ ಕಾಮಗಾರಿಯಿಂದ ಸೋರುತ್ತಿರುವ ಶಾಲೆಗಳು, ಜಲಜೀವನ್ ಮಿಷನ್ ಯೋಜನೆಗಾಗಿ ಒಡೆದ ರಸ್ತೆಗಳು, ಉದ್ಯೋಗ ಖಾತ್ರಿ ಹಾಗೂ ಸರ್ವೇಗೆ ಲಂಚದ ಕಾಟದ ಬಗ್ಗೆ ಶಾಸಕ ಕೆ.ಎಸ್. ಬಸವಂತಪ್ಪ ಅವರು ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ತಾಲ್ಲೂಕು ಪಂಚಾಯ್ತಿ ಕಚೇರಿ ಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಕರೆಯ ಲಾಗಿದ್ದ ಸಭೆಯಲ್ಲಿ ಮಾತನಾಡಿದ ಬಸವಂತಪ್ಪ, ಹೊಸ ಸರ್ಕಾರ ಬಂದ ಮೇಲೆ ಸರಿಯಾಗಿ ಕೆಲಸಗಳಾಗುತ್ತಿವೆ ಎಂಬ ಸಂದೇಶ ಜನರಿಗೆ ತಲುಪಬೇಕು. ಹಿಂದಿನ ರೀತಿಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ಹೇಳಿದರು.
ನೀರ್ಥಡಿ ಹಾಗೂ ಈಚಘಟ್ಟಗಳಲ್ಲಿ ಹೊಸ ಶಾಲೆಗಳು ಸೋರುತ್ತಿವೆ. ಗಂಗನಕಟ್ಟೆ ಶಾಲೆ ಬುನಾದಿಯಿಂದಲೇ ಕಳಪೆಯಾಗಿದೆ. ಇನ್ನು ಆರು ತಿಂಗಳಿಗೆ ಸೋರುವುದು ಗ್ಯಾರಂಟಿ. ಶಾಲೆಗಳ ವಿಷಯದ ಲ್ಲಾದರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಲಜೀವನ್ ಮಿಷನ್ ನೀರಿನ ಯೋಜನೆಗಾಗಿ ಪೈಪ್ಗಳನ್ನು ಅಳವಡಿಸು ವಾಗ ಕಾಂಕ್ರಿಟ್ ರಸ್ತೆಗಳನ್ನು ಅವೈಜ್ಞಾನಿಕ ವಾಗಿ ಒಡೆದು, ಬೇಜವಾಬ್ದಾರಿಯಿಂದ ತೇಪೆ ಹಾಕಲಾಗಿದೆ. ವಾಹನಗಳೇ ಹೋಗದಷ್ಟು ರಸ್ತೆಗಳು ಹಾಳಾಗಿವೆ. ಕಳಪೆ ತೇಪೆ ಹಾಕಿರುವ ಗುತ್ತಿಗೆದಾರರಿಗೆ ಬಿಲ್ ಕೊಡಬೇಡಿ ಎಂದು ಸೂಚನೆ ನೀಡಿದರು.
ಥರ್ಡ್ ಪಾರ್ಟಿ ಎಂದರೆ ಶಿವಾಯ ನಮಃ ಸಿದ್ಧಾರೂಢ!
ಗಂಗನಕಟ್ಟೆಯ ಶಾಲಾ ಕಟ್ಟಡ ನಿರ್ಮಾಣ ಸಂಪೂರ್ಣ ಕಳಪೆಯಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಈ ಬಗ್ಗೆ ಥರ್ಡ್ ಪಾರ್ಟಿ ಪರಿಶೀಲನೆ ನಡೆಸುವುದಾಗಿ ದಾವಣಗೆರೆ ದಕ್ಷಿಣದ ಬಿಇಒ ದಾರುಕೇಶ್ವರ್ ಹೇಳಿದರು. ಥರ್ಡ್ ಪಾರ್ಟಿ ಪರಿಶೀಲನೆ ಯಾವ ರೀತಿ ನಡೆಯುತ್ತದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಥರ್ಡ್ ಪಾರ್ಟಿ ಪರಿಶೀಲನೆ ಎಂದರೆ ಶಿವಾಯ ನಮಃ ಸಿದ್ಧಾರೂಢ! ಮೊದಲು ಕಾಮಗಾರಿ ಸರಿ ಇರುವಂತೆ ನೋಡಿಕೊಳ್ಳಿ ಎಂದು ಬಸವಂತಪ್ಪ ಹೇಳಿದರು.
ಕಾಡುಪ್ರಾಣಿ ಕಾಟದ ವೇಳೆ ಕರೆಂಟ್
ರೈತರ ಹೊಲಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಸುವ ಪದ್ಧತಿ ನಿಲ್ಲಿಸಿ, ಹಗಲಿನಲ್ಲಿ ವಿದ್ಯುತ್ ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದರು.
ಹಲವಾರು ಹಳ್ಳಿಗಳಲ್ಲಿ ರಾತ್ರಿ ವೇಳೆ ಕಾಡುಪ್ರಾಣಿಗಳ ಕಾಟ ಇದೆ. ಹೀಗಾಗಿ ರಾತ್ರಿ ವೇಳೆ ಕರೆಂಟ್ ಕೊಟ್ಟರೆ ರೈತರಿಗೆ ಸಮಸ್ಯೆಯಾಗುತ್ತದೆ. ಹಗಲಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಸಬೇಕು ಎಂದು ಹೇಳಿದರು.
ಊರೊಳಗೊಂದು ಕಾಡು, ಸಮಸ್ಯೆಯ ಗೂಡು
1970ರ ಸಮಯದಲ್ಲಿ ಗೋಮಾಳಗಳಾಗಿದ್ದ ಮ್ಯಾಸರಹಳ್ಳಿ ಗುಡ್ಡ, ನೀರ್ಥಡಿ, ಹುಚ್ಚವ್ವನಹಳ್ಳಿ ಸೇರಿದಂತೆ ಹಲವು ಹಳ್ಳಿಗಳ ಪ್ರದೇಶಗಳನ್ನು ಈಗ ಅರಣ್ಯ ಜಾಗ ಎಂದು ಅರಣ್ಯ ಇಲಾಖೆ ಗುರುತಿಸಿದೆ. ಈ ಪ್ರದೇಶಗಳು ಊರೊಳಗೇ ಇದ್ದರೂ ದಾಖಲೆಗಳಲ್ಲಿ ಕಾಡುಗ ಳಾಗಿವೆ. ಇದರಿಂದಾಗಿ ಅಲ್ಲಿನ ಜನರು ಸಮಸ್ಯೆ ಎದುರಿಸುವಂತಾಗಿದೆ. ಈ ವಿಷಯ ಪ್ರಸ್ತಾಪಿಸಿದ ಬಸವಂತಪ್ಪ, ಅರಣ್ಯ ಜಾಗದ ಡಿನೋಟಿಫೈ ಮಾಡಲು ಸರ್ಕಾರಕ್ಕೆ ವರದಿ ಕಳಿಸಿ ಎಂದು ಹೇಳಿದರು.
ರುದ್ರನಕಟ್ಟೆ ಸೇರಿದಂತೆ ಕೆಲ ಹಳ್ಳಿಗಳಲ್ಲಿ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಪಶುಪಾಲನಾ ಅಧಿಕಾರಿಗಳು ತ್ವರಿತವಾಗಿ ಜಾನುವಾರು ಗಳಿಗೆ ಲಸಿಕೆ ನೀಡಬೇಕು. ಈ ಬಗ್ಗೆ ಪಂಚಾಯ್ತಿಗಳ ಮೂಲಕ ಪ್ರಚಾರ ಮಾಡಿ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಾಗಿ ಜನರಿಂದ ಹಣ ಕೇಳಲಾಗುತ್ತಿದೆ. ಕಾಮಗಾರಿ ಆರಂಭವಾ ಗುವ ಮೊದಲೇ 5-6 ಸಾವಿರ ರೂ. ಕೊಡುವಂತೆ ಕೇಳಲಾಗುತ್ತಿದೆ. ಇದು ಇಲ್ಲಿಗೇ ನಿಲ್ಲಬೇಕು. ಅಕ್ರಮಕ್ಕೆ ಅವಕಾಶ ನೀಡುವು ದಿಲ್ಲ ಎಂದು ತಾಕೀತು ಮಾಡಿದರು.
ಸರ್ವೆ ವಿಳಂಬ ರೈತರಿಗೆ ಅತಿ ದೊಡ್ಡ ಸಮಸ್ಯೆಯಾಗಿದೆೇ. ಹಣ ಇಲ್ಲದಿದ್ದರೆ ಸರ್ವೆ ಇಲಾಖೆಯಲ್ಲಿನ ಫೈಲ್ಗಳಿಗೆ ಜೀವವೇ ಸಿಗುವುದಿಲ್ಲ ಎಂಬಂತಾಗಿದೆ. ತೋಳಹುಣಸೆ ಯಲ್ಲಿ ಈ – ಸ್ವತ್ತು ವಿಳಂಬವಾಗುತ್ತಿದೆ. ಸರ್ವೇ ಇಲಾಖೆ ಪರಿವರ್ತನೆ ಆಗಲೇಬೇಕು ಎಂದು ಬಸವಂತಪ್ಪ ತಿಳಿಸಿದರು. ಸರ್ವೇ ಇಲಾಖೆಯ ಅಧಿಕಾರಿಗಳ ಫಲದ ನಿರೀಕ್ಷೆಯಿಂದಾಗಿ ನಾವು ಜನರ ನಿರೀಕ್ಷೆಯ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಹಣ ಕೊಡಲು ಸಾಧ್ಯವಾಗದವರು ಅಲೆದಾಡಿ ಬಳಲುತ್ತಿದ್ದಾರೆ ಎಂದವರು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿ ಎಲ್.ಎ. ಕೃಷ್ಣಾ ನಾಯಕ್, ಕಾರ್ಯನಿರ್ವಾಹಕ ಅಧಿಕಾರಿ ಎನ್.ಜೆ. ಆನಂದ್, ತಹಶೀಲ್ದಾರ್ ಅಶ್ವತ್ಥ್, ಎ.ಡಿ.ಎಲ್.ಆರ್. ನಾಗಭೂಷಣ ಮತ್ತಿತತರರು ಉಪಸ್ಥಿತರಿದ್ದರು.