ದಾವಣಗೆರೆ, ಮೇ 30- ಮುಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಭತ್ತ, ತೋಟದ ಬೆಳೆಗಳು, ಬಡವರ ಮನೆಗಳು ನಾಶವಾಗಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ದಾವಣಗೆರೆ ಜಿಲ್ಲೆ, ತಾಲ್ಲೂಕಿನ ಕಸಬಾ ಹೋಬಳಿ ಮತ್ತು ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ, ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ, ಸಂತೇಬೆನ್ನೂರು ಹೋಬಳಿಗಳಲ್ಲಿ ಭತ್ತದ ಬೆಳೆಗಳು ಹಾಳಾಗಿದ್ದು, ಭತ್ತದ ಮಾರುಕಟ್ಟೆಯಲ್ಲಿ ಹಾಲಿ 2200 ರಿಂದ 2300 ರೂ. ದರ ನಿಗದಿಯಾಗಿದ್ದು, ಪ್ರಸ್ತುತ 40 ರಿಂದ 50 ಚೀಲ ಇಳುವರಿ ಬರುತ್ತಿದೆ. ಪ್ರತಿ ಎಕರೆಗೆ 75 ಸಾವಿರದಿಂದ 80 ಸಾವಿರ ಹಣ ಬರುತ್ತದೆ. ಅಕಾಲಿಕ ಮಳೆಯಿಂದಾಗಿ 60 ಸಾವಿರ ನಷ್ಟ ಉಂಟಾಗುತ್ತಿದೆ.
ಸರ್ಕಾರ ಭೂಮಿಯ ಉಳುಮೆ, ಗೊಬ್ಬರ, ಔಷಧಿ ಮತ್ತು ಕೂಲಿ ಕೆಲಸದ ಬಾಬ್ತು ಪ್ರತಿ ಎಕರೆಗೆ 30 ಸಾವಿರ ವೆಚ್ಚವಾಗುತ್ತದೆ. ಆದ್ದರಿಂದ ಪ್ರತಿ ಎಕರೆಗೆ 50 ಸಾವಿರ ರೂ. ಸರ್ಕಾರದಿಂದ ರೈತರ ಖಾತೆಗೆ ಜಮಾ ಮಾಡಬೇಕೆಂದು ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸಾದ್ ಆಗ್ರಹಿಸಿದ್ದಾರೆ.
ತೋಟದ ಬೆಳೆಗಳಾದ ಬಾಳೆ, ಎಲೆಬಳ್ಳಿ, ಮಾವು ಇತರೆ ಮಳೆ ಮತ್ತು ಆಲೆಕಲ್ಲು ಮಳೆಯಿಂದ ಬೆಳೆ ನಾಶವಾಗಿದ್ದು, ಪ್ರತಿ ಎಕರೆಗೆ 50 ಸಾವಿರ ಪರಿಹಾರವನ್ನು ನೀಡಬೇಕು. ಗಾಳಿ, ಮಳೆಯಿಂದ ಕಡು ಬಡವರ ಮನೆಗಳ ಹೆಂಚು, ತಗಡುಗಳು ಹಾರಿ ಹೋಗಿದ್ದು, ಮನೆಗಳಿಗೂ ಹಾನಿ ಉಂಟಾಗಿರು ವುದರಿಂದ ಅವರಿಗೆ ಶಾಶ್ವತ ಸೂರು ಕಲ್ಪಿಸಿಕೊಡುವಂತೆ ಒತ್ತಾಯಿಸಿದ್ದಾರೆ.