ಕರುಣಾ ಜೀವ ಕಲ್ಯಾಣ ಟ್ರಸ್ಟಿನಲ್ಲಿ ಜರುಗಿದ `ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಶಿವನಕೆರೆ ಬಸವಲಿಂಗಪ್ಪ
ದಾವಣಗೆರೆ, ಮೇ 29- ಗಾಂಧೀಜಿ ಜೀವನದ ನೂರಾರು ಪ್ರಮುಖ ಘಟನೆಗಳು ಅವರ ನೈತಿಕ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಾಕ್ಷಿಯಾಗಿವೆ. ಅವರು ಸ್ವತಃ ನೈತಿಕತೆಯ ಜೀವನ ನಡೆಸಿ, ಭಾರತ ದೇಶದ ಜನರೆಲ್ಲಾ ನೈತಿಕತೆಯ ಜೀವನ ನಡೆಸಲಿ, ಭಾರತ ನಿಜವಾದ ಅರ್ಥದಲ್ಲಿ ಸತ್ಯ, ಅಹಿಂಸೆಯ ನಡೆ, ನುಡಿ ರೂಢಿಸಿಕೊಂಡು ರಾಮರಾಜ್ಯವಾಗಲಿ ಎಂಬುದು ಅವರ ಕನಸಾಗಿತ್ತು ಎಂದು ಶಿವನಕೆರೆ ಬಸವಲಿಂಗಪ್ಪ ಹೇಳಿದರು.
ನಗರದ ಸಾಮಾಜಿಕ ಸೇವಾ ಸಂಸ್ಥೆ ಕರುಣಾ ಜೀವ ಕಲ್ಯಾಣ ಟ್ರಸ್ಟಿನಲ್ಲಿ ಕಳೆದ ವಾರ ನಡೆದ `ಭಾರತದಲ್ಲಿ ನೈತಿಕ ಅಧಿಕಾರ ಸ್ಥಾಪಿಸಲು ಹೆಣಗಿದ ಗಾಂಧೀಜಿ’ ಎಂಬ ವಿಷಯದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು
ಅದಕ್ಕಾಗಿ ಗಾಂಧೀಜಿ ಸಪ್ತ ಸಾಮಾಜಿಕ ಪಾತಕಗಳಾದ ತತ್ವರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ನೀತಿ ಹೀನ ವಾಣಿಜ್ಯ, ಶೀಲವಿಲ್ಲದ ಶಿಕ್ಷಣ, ಆತ್ಮಸಾಕ್ಷಿರಹಿತ ಭೋಗ, ಮಾನವತಾ ಶೂನ್ಯ ವಿಜ್ಞಾನ, ತ್ಯಾಗವಿಲ್ಲದ ಪೂಜೆ ಇವುಗಳು ಸಮಾಜಕ್ಕೆ ಪಾತಕಗಳು. ಈ ಪಾತಕಗಳಿಂದ ನಾವು ಮುಕ್ತರಾಗೋಣವೆಂದು ಪ್ರತಿಪಾದಿಸಿದರು. ಅಲ್ಲದೇ ದಶ ವ್ರತಗಳಾದ ಅಹಿಂಸೆ, ಆಸ್ತೇಯ, ಬ್ರಹ್ಮಚರ್ಯ, ಸ್ವದೇಶಿ ವಸ್ತುಗಳ ಬಳಕೆ, ಸತ್ಯ, ಅಸಂಗ್ರಹ, ಶರೀರ ಶ್ರಮ, ಅಸ್ವಾದ, ಸರ್ವತ್ರ ಭಯವರ್ಜನ, ಸರ್ವಧರ್ಮ ಸಮಾನತ್ವ ಇವುಗಳನ್ನು ಪಾಲಿಸುತ್ತಿದ್ದರು ಮತ್ತು ಭಾರತೀಯರಿಗೆ ಪಾಲಿಸಲು ವಿನಂತಿಸುತ್ತಿದ್ದರು.
ಅನೈತಿಕತೆಯ ಗ್ಯಾಂಗ್ರಿನ್..
`ಇಡೀ ದೇಶಕ್ಕೆ ಅನೈತಿಕತೆಯ ಗ್ಯಾಂಗ್ರಿನ್ ಹಿಡಿದಿದೆ. ಅದನ್ನು ಗಾಂಧಿ ತತ್ವಗಳಿಂದ ಆಪರೇಷನ್ ಮಾಡಿ, ದೇಶ ಉಳಿಸಬೇಕಾಗಿದೆ’
– ಆವರಗೆರೆ ರುದ್ರಮುನಿ, ರೈತ ನಾಯಕರು
ಗಾಂಧೀಜಿಯಿಂದ ಪ್ರೇರೇಪಿತರಾದ ಸಮಕಾಲೀನ ಲಕ್ಷಾಂತರ ನೇತಾರರು ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿ ನೈತಿಕತೆ, ಸರಳತೆ, ಸೌಹಾರ್ದತೆ, ಪರಧರ್ಮ ಸಹಿಷ್ಣುತೆಗಳ ಪ್ರಕಾರ ಬಾಳಿದರು. ಕೇವಲ ಸ್ವತಂತ್ರ ಬಂದು 75 ವರ್ಷಗಳಲ್ಲಿ ದೇಶದ ಅರ್ಧಕ್ಕಿಂತಲೂ ಜಾಸ್ತಿ ಕ್ರಿಮಿನಲ್ ಹಿನ್ನೆಲೆ ಇರುವವರು ಶಾಸಕರು, ಸಂಸದರು ಆಗಿದ್ದಾರೆ ಎನ್ನುವುದು ನೈತಿಕತೆಯ ಕುಸಿತದ ಪರಿಣಾಮ. ಅನೇಕ ಶ್ರೀಮಂತರು ರಾಜಕಾರಣ ಸೇವೆ ಎಂದರಿಯದೆ, ಖ್ಯಾತಿ ಮತ್ತು ಮತ್ತಷ್ಟು ಶ್ರೀಮಂತರಾಗಲೆಂದೇ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ.
ಈ ಪ್ರಸ್ತುತ ಪರಿಸ್ಥಿತಿ ವಿಷಾದವೆನಿಸುತ್ತದೆ. ಆದರೆ, ಸರಳರೂ, ಸಜ್ಜನರೂ ದೇಶ ನಡೆಸುವುದು ಗಾಂಧೀಜಿಯವರ ಇಚ್ಚೆಯಾಗಿತ್ತು. ಉದಾಹರಣೆಗೆ ಹಿಂದೆ ರಾಜಾಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸರೋಜಿನಿ ನಾಯ್ಡು, ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ಯಶೋಧರ ದಾಸಪ್ಪ, ವೀರೇಂದ್ರ ಪಾಟೀಲ್, ಮುರಾರ್ಜಿ ದೇಸಾಯಿ ಮುಂತಾದ ಗಾಂಧಿವಾದಿಗಳು ದೇಶದ ಚುಕ್ಕಾಣಿ ಹಿಡಿದಿದ್ದರು.
ಈಗಲೂ ಸಹ ಕಾಲ ಮಿಂಚಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಕೇವಲ ಗಾಂಧೀಜಿ, ಬಸವಣ್ಣನವರ ಫೋಟೋ ಹಾಕುವುದು ಮಾತ್ರವಲ್ಲ ಅವರ ನೈತಿಕತೆಯ ಆದರ್ಶದ ಗುಣಗಳನ್ನು ಸಹ ಅಳವಡಿಸಿಕೊಂಡು ನೈತಿಕ ಆಡಳಿತ ನಡೆಸ ಬೇಕಾಗಿದೆ .
ಗಾಂಧೀಜಿಯವರಲ್ಲಿದ್ದ ತಾಯ್ತನ, ಬಡವರ ಬಗ್ಗೆ ಅನುಕಂಪ, ಅಸ್ಪೃಶ್ಯತೆ ನಿವಾರಣೆ, ಕೋಮು ಸೌಹಾರ್ದತೆ, ಮಹಿಳಾ ಸಮಾನತೆ ಇವೆಲ್ಲವೂ ಇನ್ನೂ ಜಾರಿಗೆ ಬಂದಿಲ್ಲ. ಅವುಗಳ ಅಳವಡಿಕೆ ಮುಖ್ಯವೆಂದು ಶಿವನಕೆರೆ ಬಸವಲಿಂಗಪ್ಪ ತಿಳಿಸಿದರು.
ರೈತ ನಾಯಕ ಆವರಗೆರೆ ರುದ್ರಮುನಿ ಮಾತನಾಡಿ, ಇಡೀ ದೇಶಕ್ಕೆ ಅನೈತಿಕತೆಯ ಗ್ಯಾಂಗ್ರಿನ್ ಹಿಡಿದಿದೆ. ಅದನ್ನು ಗಾಂಧಿ ತತ್ವಗಳಿಂದ ಆಪರೇಷನ್ ಮಾಡಿ, ದೇಶ ಉಳಿಸಬೇಕಾಗಿದೆ ಎಂದರು.
ಸಂವಾದದಲ್ಲಿ ಗುರುಮೂರ್ತಿ, ಎನ್.ಕೆ.ಗೌಡ, ಮಲ್ಲಾಬಾದಿ ಬಸವರಾಜ್, ಮುರುಳೀಧರ್, ನರಸಿಂಹ ಮೂರ್ತಿ ಮುಂತಾದವರು ಭಾಗವಹಿಸಿ ಮಾತನಾಡಿದರು.