ರೈತರಿಗೆ ಕೊಟ್ಟ ಭರವಸೆಗಳನ್ನು ಈಡೇರುಸುವಂತೆ ಎಐಕೆಎಸ್ ಒತ್ತಾಯ

ದಾವಣಗೆರೆ, ಮೇ 29- ಚುನಾವಣೆಗೂ ಮುನ್ನ ರೈತರಿಗೆ ಕೊಟ್ಟ ಭರವಸೆಗಳನ್ನು ಈಡೇರುಸುವಂತೆ ಅಖಿಲ ಭಾರತ ಕಿಸಾನ್ ಸಭಾ ನೂತನ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಕೆಎಸ್ ಜಿಲ್ಲಾಧ್ಯಕ್ಷ ಹೆಚ್.ಜಿ. ಉಮೇಶ್ ಅವರು, ರಾಜ್ಯದಲ್ಲಿ ಜಾರಿ ಮಾಡಿದ್ದ ಎಲ್ಲಾ ರೈತ ವಿರೋಧಿ ಕಾನೂನು ತಿದ್ದುಪಡಿಗಳನ್ನು ಹಿಂಪಡೆಯುವ ಬಗ್ಗೆ ಅಗತ್ಯ ಸುಗ್ರಿವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಬಳಕೆ ಮಿತಿ ಏರಿಕೆ , ಬಡ್ಡಿ ರಹಿತ ಕೃಷಿ ಸಾಲದ ಮಿತಿಯನ್ನು ಮೂರರಿಂದ ಹತ್ತು ಲಕ್ಷದವರೆಗೆ ಏರಿಕೆ, ಸೂಕ್ತ ಬೆಂಬಲ ಬೆಲೆ, ಮಾರುಕಟ್ಟೆ ವಿಸ್ತರಣೆಯಂತಹ ಭರವಸೆಗಳನ್ನು ಆದ್ಯತೆ ಮೇರೆಗೆ ಕೂಡಲೇ ಸಂಪುಟ ಒಪ್ಪಿಗೆ ಪಡೆದು ಆದೇಶ ನೀಡುವಂತೆ ಮನವಿ ಮಾಡಿದರು.

ಉಳಿಮೆ ಹಕ್ಕನ್ನು ಸರ್ಕಾರಿ ಭೂಮಿಯ ಗೇಣಿದಾರಿಕೆ ಎಂದು ಪರಿಗಣಿಸಿ ಅವರನ್ನು ಒಕ್ಕಲೆಬ್ಬಿಸುವುದು, ಖಾಲಿ ಮಾಡಿಸುವುದು, ಭೂಸ್ವಾಧೀನ ಪಡಿಸುವುದನ್ನು ತಡೆಯುವಂತಹ ಸೂಕ್ತ ಕಾನೂನು ರಕ್ಷಣೆ ನೀಡಿ, ಹೊಸ ಮಾನದಂಡ ನಿಗದಿಪಡಿಸಿ ಅರ್ಜಿ ಸ್ವೀಕರಿಸಿ ಹಕ್ಕುಪತ್ರ ನೀಡುವ ನೀತಿಯನ್ನು ರೂಪಿಸಬೇಕೆಂದು ಆಗ್ರಹಿಸಿದರು.

ರಾಜ್ಯದ ಸಣ್ಣ, ಅತಿಸಣ್ಣ ರೈತರ, ಕೃಷಿ ಕಾರ್ಮಿಕರ, ಕುಶಲ ಕರ್ಮಿಗಳ ನಿವೇಶನ, ವಸತಿ ಸಮಸ್ಯೆಗಳನ್ನು ಅತ್ಯಗತ್ಯ ಆದ್ಯತೆಯ ಮೇರೆಗೆ ಪರಿಗಣಿಸಲು ನೀತಿ ರೂಪಿಸಬೇಕೆಂದರು.

ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿರುವ 11 ಜಿಲ್ಲೆಗಳಲ್ಲಿ ಕಸ್ತೂರಿರಂಗನ್ ವರದಿ ಜಾರಿ ಸಂಬಂಧ ಉಂಟಾಗಿರುವ ಸಮಸ್ಯೆಗಳಾದ ಬಫರ್ ಜೋನ್, ಪರಿಸರ ಸೂಕ್ತ ವಲಯ, ಮೂಲಭೂತ ಸೌಕರ್ಯ ಅಭಿವೃದ್ಧಿ ತಡೆ ಇತ್ಯಾದಿ ಮಾನವ ಹಕ್ಕುಗಳ ವಿಚಾರಗಳನ್ನು ಪುನರ್ ಪರಿಶೀಲಿಸಲು ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಘೋಷಿಸಿದ ಗ್ಯಾರಂಟಿಗಳನ್ನು ಕೂಡಲೇ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಈಗ ಗ್ಯಾರಂಟಿ ಜಾರಿ ಬಗ್ಗೆ ಸೃಷ್ಠಿಯಾಗಿರುವ ಗೊಂದಲಗಳನ್ನು ನಿವಾರಣೆ ಮಾಡಬೇಕೆಂದು ಉಮೇಶ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಕೆಎಸ್ ಮುಖಂಡರಾದ ಐರಣಿ ಚಂದ್ರು, ಸಿದ್ಧಲಿಂಗಪ್ಪ ಹಾಲೇಕಲ್ಲು, ನರೇಗಾ ರಂಗನಾಥ್, ಭೀಮಾರೆಡ್ಡಿ, ಎ. ತಿಪ್ಪೇಶಿ, ಕುಂದುವಾಡ ಚಂದ್ರಪ್ಪ, ಎನ್.ಟಿ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. 

error: Content is protected !!