ನಗರದಲ್ಲಿ ನಾಳೆ ಬೃಹತ್ ಉದ್ಯೋಗ ಮೇಳ

ದಾವಣಗೆರೆ, ಮೇ 29- ಜಿಎಂಐಟಿ ಪ್ಲೇಸ್ಮೆಂಟ್ ವಿಭಾಗದ ಸಹಯೋಗದೊಂದಿಗೆ ನಗರದ ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಡಿದ್ದು ದಿನಾಂಕ 31ರ ಬುಧವಾರ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಎಂಐಟಿ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ.ಆರ್ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳೂ ಈ ಮೇಳದಲ್ಲಿ  ಭಾಗವಹಿಸಬಹುದು ಎಂದರು.

ಸ್ಮೈಡರ್ ಎಲೆಕ್ಟ್ರಿಕ್, ಬಜಾಜ್ ಅಲಿಯನ್ಸ್, ಬಿಎಫ್‌ಡಬ್ಲ್ಯೂ, ಸ್ಯಾಮ್ಸಂಗ್, ಲೈಟಿಂಗ್ ಟೆಕ್ನಾಲಜೀಸ್, ಸೆವೆಂತ್ ಸೆನ್ಸ್ ಟೆಕ್ನಾಲಜೀಸ್, ಜಿಎಂ ಸಮೂಹ ಸಂಸ್ಥೆಗಳು, ಫೇಸ್ ಪವರ್ ಸಿಸ್ಟಮ್ಸ್, ಹೋಂಡಾ ಮೋಟಾರ್ಸ್, ಸಾಸ್ಮೋಸ್ ಟೆಕ್ನಾಲಜೀಸ್ ಸೇರಿದಂತೆ, 35ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, 4800 ಉದ್ಯೋಗಾವಕಾಶ ಲಭ್ಯವಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ನಾಳೆ ಬುಧವಾರ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಶೈಲ ಎಜುಕೇಶನಲ್ ಟ್ರಸ್ಟ್  ಖಜಾಂಚಿ  ಜಿ.ಎಸ್. ಅನಿತ್‌ಕುಮಾರ್ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಡಿ. ಕುಂಬಾರ್ ನೆರವೇರಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ. ಶ್ವೇತಾ ಮರಿಗೌಡರ್, ಅಭಿಷೇಕ್, ಅಭಿಲಾಷ್ ಉಪಸ್ಥಿತರಿದ್ದರು.

error: Content is protected !!