ದಾವಣಗೆರೆ, ಮೇ 23- ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಪ್ರಮುಖ ಖಾತೆ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ್ವ ಆರಂಭವಾಗಿದ್ದು, ಇಡೀ ರಾಜ್ಯದ ಜನತೆ ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು.
ಈ ಹಿಂದೆ ಸಚಿವರಾಗಿದ್ದಾಗ ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಾಕಷ್ಟು ಶ್ರಮಿಸಿರುವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಂಪುಟ ದರ್ಜೆ ಸಚಿವರನ್ನಾಗಿ ಮಾಡುವ ಜೊತೆಗೆ ಪ್ರಮುಖ ಖಾತೆಯನ್ನು ನೀಡಬೇಕೆಂದು ಆಗ್ರಹಿಸಿದರು. ಭಾರತ್ ಜೋಡೋ, ಪ್ರಜಾಧ್ವನಿ, ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳು ಸೇರಿದಂತೆ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದಂತಹ ಯಶಸ್ವೀ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಜನರ ಮನ ಗೆದ್ದಿದೆ ಎಂದರು. ಯಾವುದೇ ಪ್ರಬಲ ಖಾತೆ ನೀಡಿದರೂ ಅದನ್ನು ಎಸ್ಸೆಸ್ಸೆಂ ಸಮರ್ಪಕವಾಗಿ ನಿಭಾಯಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮುದೇಗೌಡ್ರ ಗಿರೀಶ್, ಎ. ನಾಗರಾಜ್, ಅಬ್ದುಲ್ ಲತೀಫ್, ಎಸ್. ಮಲ್ಲಿಕಾರ್ಜುನ್, ಶಾಮನೂರು ಟಿ. ಬಸವರಾಜ್ ಮತ್ತಿತರರಿದ್ದರು.