ದಾವಣಗೆರೆ, ಮೇ 14- ಕಳೆದ ನಾಲ್ಕು ವರ್ಷಗಳಿಂದ ಕೇವಲ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಬೆಲೆ ಏರಿಕೆಗಳಿಂದ ರೋಸಿ ಹೋಗಿದ್ದ ರಾಜ್ಯದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಸರಿಯಾದ ತೀರ್ಪನ್ನು ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯದ ಉದ್ದಗಲಕ್ಕೂ ದೊಡ್ಡ ಪ್ರಚಾರ ಸಭೆಗಳು, ರೋಡ್ ಶೋಗಳನ್ನು ಮಾಡಿದ್ದರು. ಆದರೂ ರಾಜ್ಯದ ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ದೇಶದ ಇತಿಹಾಸದಲ್ಲಿ ಪ್ರಧಾನಮಂತ್ರಿಗಳಾದವರು ಯಾರು ಕೂಡ ಬೀದಿ ಬೀದಿಗೆ ಮತ ಭಿಕ್ಷೆಗೆ ಬಂದಿರುವ ಉದಾರಣೆಗಳಿಲ್ಲ. ಪ್ರಧಾನಮಂತ್ರಿ ಸ್ಥಾನದ ಗೌರವವನ್ನು ಮೋದಿ ಕಳೆದಿದ್ದಾರೆ ಎಂದು ಟೀಕಿಸಿದ್ದಾರೆ.
2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ. ಪ್ರಧಾನಿ ಮೋದಿಯವರು ತಮ್ಮ ಸ್ಥಾನದ ಗೌರವ ಮರೆತು ರಾಮನ ಭಕ್ತ ಹನುಮನ ಹೆಸರಲ್ಲಿ ಜೈ ಭಜರಂಗಿ ಎಂದು ಅಪಪ್ರಚಾರ ಮಾಡಿದರು. ಸುಳ್ಳನ್ನೇ ನಿಜ ಮಾಡಲು ಹೊರಟು ವಿಫಲರಾಗಿದ್ದಾರೆ ಎಂದು ಬಸವರಾಜ್ ತಿಳಿಸಿದ್ದಾರೆ.