ಹರಪನಹಳ್ಳಿ, ಮೇ 11- ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತಾಲ್ಲೂಕಿನಲ್ಲಿ 4089 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 3732 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.91.26 ರಷ್ಟು ಫಲಿತಾಂಶ ಬಂದಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಹರಪನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆಯಲ್ಲಿ ಫಲಿತಾಂಶದಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ. 2026 ಬಾಲಕರಲ್ಲಿ 1811 ಬಾಲಕರು ಹಾಗೂ 2063 ಬಾಲಕಿಯರಲ್ಲಿ 1921 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪಟ್ಟಣದ ಕೆಸಿಎ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಬಸವರಾಜ ಕುಂಬಾರ 614 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಪಟ್ಟಣದ ವಿವಿಎಸ್ ಪ್ರೌಢಶಾಲೆಯ ತನ್ಮಯಿ ಕೆ.ಐ. ಹಾಗೂ ಆದರ್ಶ ವಿದ್ಯಾಲಯದ ಎಸ್.ಎಂ.ಎ.ರಶ್ಮಿಕ 612 ಅಂಕ ಗಳಿಸಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಪಟ್ಟಣದ ವಿವಿಎಸ್ ಪ್ರೌಢಶಾಲೆಯ ಹರಪನಹಳ್ಳಿಯ ಎಂ.ಬಿ.ರೆಹಾನ್ ಮಲ್ಲಿಕ್ 611 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾನೆ. ತಾಲ್ಲೂಕು ಉತ್ತಮ ಫಲಿತಾಂಶ ಪಡೆಯಲು ಕಾರಣೀಭೂತರಾದ ತಾಲ್ಲೂಕು ಆಡಳಿತಕ್ಕೆ, ಎಲ್ಲಾ ಶಿಕ್ಷಕರಿಗೆ, ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಅಭಿನಂದನೆ ಸಲ್ಲಿಸಿದ್ದಾರೆ.