ಅಂಗನವಾಡಿ ಕೇಂದ್ರಗಳಿಗೆ ಕೂಡಲೇ ಹಾಲಿನ ಪುಡಿ ಪೂರೈಕೆಗೆ ಆಗ್ರಹ

ದಾವಣಗೆರೆ, ಮೇ 11- ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಹಾಲಿನ ಪುಡಿ ಪೂರೈಕೆಯಾಗಿರುವುದಿಲ್ಲ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಹಾಲಿನ ಸೇವನೆ ಅತ್ಯವಶ್ಯವಾಗಿದ್ದು, ಕೂಡಲೇ ಹಾಲಿನ ಪುಡಿ ಸರಬರಾಜು ಮಾಡುವಂತೆ ಎಐಡಿಎಸ್‌ಓ ಒತ್ತಾಯಿಸಿದೆ.

ಸರ್ಕಾರದ ಈ ಲೋಪದಿಂದಾಗಿ ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ 36 ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಗೂ 6 ಲಕ್ಷಕ್ಕೂ ಹೆಚ್ಚು ಗರ್ಭಿಣಿಯರು, ಬಾಣಂತಿಯರು ಹಾಲಿನಿಂದ ವಂಚಿತರಾಗಿದ್ದಾರೆ.

ಸರ್ಕಾರ ಈಗಾಗಲೇ ಅವಶ್ಯಕತೆಗಿಂತ 5 ಪಟ್ಟು ಕಡಿಮೆ ಹಾಲಿನ ಪುಡಿಯನ್ನು ಪೂರೈಕೆ ಮಾಡುತ್ತಿದೆ. ಮೂರರಿಂದ ಆರು ವರ್ಷದೊಳಗಿನ ಒಂದು ಮಗುವಿನ ಸಮರ್ಪಕ ಬೆಳವಣಿಗೆ ದಿನಕ್ಕೆ ಕನಿಷ್ಠ 450 ಮಿಲಿ ಲೀಟರ್ ಹಾಲಿನ ಅವಶ್ಯಕತೆ ಇದೆ. ಅಂದರೆ 70 ಗ್ರಾಂ ಹಾಲಿನ ಪುಡಿ ಬದಲಿಗೆ 15 ಗ್ರಾಂ ಮಾತ್ರ ನೀಡುತ್ತಿದೆ ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ತಿಳಿಸಿದ್ದಾರೆ.

ಬಡತನ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯದಲ್ಲಿ ಅಪೌಷ್ಠಿಕತೆಯ ಪ್ರಮಾಣ ಹೆಚ್ಚಿದೆ. ನಮ್ಮ ದೇಶದಲ್ಲಿ ಪ್ರತಿದಿನ ಹಸಿವು ಮತ್ತು ಅಪೌಷ್ಠಿಕತೆಯಿಂದಾಗಿ 5000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಕ್ಕಳ ಪೌಷ್ಠಿಕಾಂಶಗಳ ಪೂರೈಕೆಗಾಗಿ ಲಕ್ಷಾಂತರ ಕುಟುಂಬಗಳು ಅಂಗನವಾಡಿ ಕೇಂದ್ರಗಳನ್ನು ಅವಲಂಬಿಸಿವೆ ಎಂದು ಹೇಳಿದ್ದಾರೆ.

ಕೂಡಲೇ ರಾಜ್ಯದ ಅಂಗನವಾಡಿಗಳಿಗೆ ಹಾಲಿನ ಪುಡಿಯನ್ನು ಪೂರೈಸುವಂತೆ ಆಗ್ರಹಿಸಿದ್ದಾರೆ. 

error: Content is protected !!