ದಾವಣಗೆರೆ, ಮೇ 11- ಅತಿಯಾದ ಮೊಬೈಲ್ ಬಳಕೆ ಕೂಡ ಆರೋಗ್ಯಕ್ಕೆ ಮಾರಕವಾಗಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾನಸಿಕ ಕಾಯಿಲೆಗಳು ಬರಲು ನಿರ್ದಿಷ್ಟ ಕಾರಣಗಳಿರುವುದರಿಂದ ಅವುಗಳನ್ನು ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ. ನಮ್ಮ ಆಲೋಚನೆಗಳು, ಭಾವನೆಗಳು, ನಿರ್ಧಾರಗಳು ಎಲ್ಲವೂ ಪರಿಸ್ಥಿತಿಗೆ ಅಥವಾ ವಾಸ್ತವಿಕತೆಗೆ ತಕ್ಕಂತೆ ಇರುತ್ತದೆ. ಈ ಸ್ಥಿತಿಯಲ್ಲಿ ನಮಗೆ ಯಾವುದೇ ಅಹಿತ ಭಾವ, ನೋವು, ದುಃಖ, ಕೋಪ, ಭಯ ಇರುವುದಿಲ್ಲ. ಇಂತಹ ಮನಸ್ಥಿತಿಯನ್ನು ಮಾನಸಿಕ ಅರೋಗ್ಯ ಎನ್ನಬಹುದು ಎಂದರು.
ಮಾನಸಿಕ ಕಾಯಿಲೆ ವಂಶಪಾರಂಪರ್ಯವಾಗಿ ಬರುತ್ತದೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಒತ್ತಡ, ಖಿನ್ನತೆ, ನಕಾರಾತ್ಮಕ ಚಿಂತನೆಗಳು ಮಾನಸಿಕ ಕಾಯಿಲೆಗೆ ಕಾರಣವಾಗಬಹುದು ಎಂದು ಹೇಳಿದರು.
ಮಾನಸಿಕ ಸಮಸ್ಯೆಗಳನ್ನು ಇತರರಲ್ಲಿ ಹಂಚಿಕೊಳ್ಳುವುದು, ಯೋಗ, ಧ್ಯಾನ, ಸಂಗೀತ ಆಲಿಸುವುದು, ಸಕಾರಾತ್ಮಕವಾಗಿ ಚಿಂತನೆಗಳ ಕಡೆಗೆ ಹೆಚ್ಚು ಒತ್ತು ನೀಡುವುದರಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಪ್ರಸ್ತುತ ಯೋಗ ಕೂಡ ಮಾರಾಟದ ಸರಕಾಗಿದೆ. ಮಾನಸಿಕ ಕಾಯಿಲೆ ಪೂರ್ವಾಗ್ರಹ ಪೀಡಿತ ನಂಬಿಕೆ ಜನರಲ್ಲಿದೆ. ಶೇ. 80 ರಷ್ಟು ಕಾಯಿಲೆಗಳಿಗೆ ಮನಸ್ಸು ಕಾರಣ ಎಂದರು.
ಬೇರೆಲ್ಲಾ ಕಾಯಿಲೆಗಳಿಗೆ ನಾವು ಹೇಗೆ ಕಾಳಜಿಯಿಂದ ಚಿಕಿತ್ಸೆ ಪಡೆಯುತ್ತೇವೆಯೋ ಅದೇ ರೀತಿ ಮಾನಸಿಕ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಹೆಚ್ಚು ಮಾನಸಿಕ ತೊಂದರೆಗೆ ಒಳಗಾಗುತ್ತಾಳೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಸಹ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅವಶ್ಯವಿದೆ. ಪತ್ರಕರ್ತರೂ ಸಹ ಸಾಮಾಜಿಕ ವೈದ್ಯರು ಎಂದು ಹೇಳಿದರು.
ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಪ್ರತಿ ಜಿಲ್ಲೆಯಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮನೋವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದ್ದು, ಮಾನಸಿಕ ರೋಗಿಗಳ ತಪಾಸಣೆ ಕೂಡ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಎ.ಎನ್.ಸುಂದರೇಶ್, ಪ್ರಭುದೇವ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರನ್ನು ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷ ಕೆ.ಏಕಾಂತಪ್ಪ, ಖಜಾಂಚಿ ಮಧುನಾಗರಾಜ್, ರವಿಬಾಬು ಮತ್ತಿತರರಿದ್ದರು.