ಜಗಳೂರು ಕ್ಷೇತ್ರದಲ್ಲಿ ಶೇ. 82 ಮತದಾನ

ಜಗಳೂರು ಕ್ಷೇತ್ರದಲ್ಲಿ ಶೇ. 82 ಮತದಾನ - Janathavaniಜಗಳೂರು, ಮೇ 10- ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯಗೊಂಡಿದೆ.

ಬಹುತೇಕ ಗ್ರಾಮೀಣ ಪ್ರದೇಶದ ಮತಗಟ್ಟೆಗಳಲ್ಲಿ ಬೆಳಗಿನ ಸಮಯದಲ್ಲಿ ನೀರಸವಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನ 3 ಗಂಟೆ ನಂತರ ಬಿರುಸಿನ ಮತದಾನವಾಗಿದೆ.

ಬಿಳಿಚೋಡು ಮತ್ತು ದೊಣೆಹಳ್ಳಿ ಗ್ರಾಮದ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದರಿಂದ ಆರು ಗಂಟೆ ನಂತರವೂ ಮತದಾನ ನಡೆಯಿತು.

ತಾಲ್ಲೂಕಿನ ಹನುಮಂತಪುರ ಗೊಲ್ಲರಹಟ್ಟಿ ಗ್ರಾಮದ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ ಸ್ವಲ್ಪ ಸಮಯ ಮತದಾನದಲ್ಲಿ ವ್ಯತ್ಯಯವಾಗಿ ತಕ್ಷಣವೇ ಅಧಿಕಾರಿಗಳು ಸರಿಪಡಿಸಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಂದುವರೆಸಿದರು.

ಬಿಜೆಪಿ ಅಭ್ಯರ್ಥಿ ಶಾಸಕ ಎಸ್‌.ವಿ. ರಾಮಚಂದ್ರ, ದಾವಣಗೆರೆ ಮಹಿಳಾ ಸೇವಾ ಸಮಾಜದ ಮತಗಟ್ಟೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ಬಿ,  ಸ್ವಗ್ರಾಮ ಚಿಕ್ಕಮ್ಮನಹಟ್ಟಿಯಲ್ಲಿ ಮತ್ತು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್.ಪಿ. ರಾಜೇಶ್  ಸ್ವಗ್ರಾಮ ಬಿದರಕೆರೆಯಲ್ಲಿ   ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. 

ಕ್ಷೇತ್ರದ 29 ಗ್ರಾಪಂ 1 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 97,690 ಗಂಡು, 95,257 ಹೆಣ್ಣು ಮತ್ತು ಇತರೆ 11 ಸೇರಿದಂತೆ 1,92,958 ಮತದಾರರಿದ್ದು, ಒಟ್ಟು 262 ಬೂತ್‍ಗಳಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. 128 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಲಾಗಿತ್ತು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿಮಸ್ಟರಿಂಗ್ ನಡೆದು ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಭದ್ರತೆಯೊಂದಿಗೆ ಜಿಲ್ಲಾ ಕೇಂದ್ರಕ್ಕೆ ರವಾನಿಸಲಾಗುವುದು. ಮೇ 13 ರಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

error: Content is protected !!