ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ

ದಾವಣಗೆರೆ, ಮೇ 9-  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು  ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. 

ಈಗಾಗಲೇ ಎಲ್ಲಾ ಮತಗಟ್ಟೆಗಳಿಗೆ ಮತದಾನ ಸಿಬ್ಬಂದಿಗಳು ತಲುಪಿದ್ದು,  ಜಿಲ್ಲೆಯ ಎಲ್ಲಾ 1685 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.  ಮತದಾನದ ವೇಳೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ. 

 ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಬಿಎಲ್‍ಓ ಗಳ ಮೂಲಕ ವೋಟರ್ ಸ್ಲಿಪ್‍ಗಳನ್ನು ವಿತರಣೆ ಮಾಡಲಾಗಿದೆ. ಎಲ್ಲಾ ಮತದಾರರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಮತದಾನ ಮಾಡಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲಾಗಿದೆ. ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

ಜಿಲ್ಲೆಯ 7 ಕ್ಷೇತ್ರಗಳಿಂದ 7,21,964 ಪುರುಷ, 7,20,004 ಮಹಿಳೆಯರು, 118 ಇತರೆ, 467 ಸೇವಾ ಮತದಾರರು ಸೇರಿ 14,42,553 ಮತದಾ ರರಿದ್ದಾರೆ. 1,685 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 

ಮತಗಟ್ಟೆ 100 ಮೀಟರ್ ಒಳಗೆ ಯಾವುದೇ ಚುನಾವಣಾ ಮತ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿಗಳು, ಪಕ್ಷದವರು ಮತ ಕೇಂದ್ರದ 200 ಮೀಟರ್ ವ್ಯಾಪ್ತಿ ನಂತರ 1 ಟೇಬಲ್, 2 ಚೇರ್ ಹಾಗೂ 1 ಬ್ಯಾನರ್ 3 ಅಡಿ ಉದ್ದ ಮತ್ತು 1.5 ಅಡಿ ಎತ್ತರ ಇರುವುದನ್ನು ಉಪಯೋಗಿಸಿ ಮತದಾರರ ಪ್ರಚಾರ ಸಹಾಯವಾಣಿ ನಡೆಸಲು ಅವಕಾಶ ಇದೆ. ಮತ್ತು ಇವರು ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿಯನ್ನು ಇಟ್ಟುಕೊಂಡಿರಬೇಕು, ಇದಕ್ಕೆ ಚುನಾವಣಾಧಿಕಾರಿಯ ಅನುಮತಿ ಕಡ್ಡಾಯವಾಗಿದೆ.

ಮತಗಟ್ಟೆ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಯಾವುದೇ ಶಾಸಕರು, ಸಂಸದರು, ಸಚಿವರುಗಳು ಅಭ್ಯರ್ಥಿಗಳಿಗೆ ಏಜೆಂಟರು, ಮತದಾನ ಏಜೆಂಟರು, ಎಣಿಕೆ ಏಜೆಂಟರಾಗುವಂತಿಲ್ಲ. ಮತದಾನ ಕೇಂದ್ರದೊಳಗೆ ಮತಗಟ್ಟೆ ಅಧಿಕಾರಿಗಳಿಗೆ, ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ, ಚುನಾವಣಾ ಆಯೋಗದಿಂದ ನೇಮಕವಾದ ಅಧಿಕಾರಿಗಳಿಗೆ, ಅಭ್ಯರ್ಥಿಗಳ ಒಬ್ಬ ಏಜೆಂಟರಿಗೆ, ಅಂಧ, ದುರ್ಬಲ ಮತದಾರರ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಇರುತ್ತದೆ.  ದೂರು, ಸಹಾಯಕ್ಕಾಗಿ ಟೋಲ್‍ಫ್ರೀ ಬಳಸಿ 1950 ಬಳಸುವಂತೆ ಅವರು ಹೇಳಿದ್ದಾರೆ.

ಪ್ರವಾಸಿ ತಾಣಗಳು ಬಂದ್; ಮೇ 10 ವಿಧಾನಸಭಾ ಚುನಾವಣಾ ಮತದಾನ ನಡೆಯಲಿರುವು ದರಿಂದ ದಾವಣಗೆರೆ ಗ್ಲಾಸ್‍ಹೌಸ್ ಮತ್ತು ಶಾಂತಿ ಸಾಗರದಲ್ಲಿ ಯಾವುದೇ ಪ್ರವಾಸಿಗರಿಗೆ ಅವಕಾಶ ಇರುವುದಿಲ್ಲ. ಮತದಾನದ ಪ್ರಯುಕ್ತ ಮುಚ್ಚಲಾಗಿ ರುತ್ತದೆ. ನಂತರ ಎಂದಿನಂತೆ ಲಭ್ಯವಿರಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ. 

error: Content is protected !!