ದಾವಣಗೆರೆ, ಮೇ 3- ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧದ ಪ್ರಸ್ತಾಪ ಮಾಡಿ ದೇಶದ್ರೋಹದ, ಧರ್ಮದ್ರೋಹದ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸಬೇಕೆಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಂಚಾಲಕ ಸಿ.ಎಸ್. ರಾಜು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ದೇಶಪ್ರೇಮ, ದೇಶಭಕ್ತಿ, ಧರ್ಮರಕ್ಷಣೆಯನ್ನು ಮೈಗೂಡಿಸಿಕೊಂಡಿರುವ ಬಜರಂಗ ದಳ ಸಂಘಟನೆ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಪ್ರಸ್ತಾಪ ಮಾಡಿದೆ. ಇದನ್ನು ಬಜರಂಗ ದಳ ಉಗ್ರವಾಗಿ ಖಂಡಿಸುತ್ತದೆ ಎಂದರು.
ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಕಾರಣ ನಾವು ಯಾವುದೇ ಪ್ರತಿಭಟನೆಗೆ ಮುಂದಾಗಿಲ್ಲ.
ಕೇವಲ ಪತ್ರಿಕಾಗೋಷ್ಠಿಯ ಮೂಲಕ ನಮ್ಮ ಆಕ್ರೋಶವನ್ನು ಹೊರಹಾಕಿದ್ದೇವೆ. ಜಿಲ್ಲಾಡಳಿತಕ್ಕೆ ಮನವಿ ಮಾತ್ರ ಕೊಡಲಾಗುವುದು ಎಂದು ಹೇಳಿದರು.
ಕೇವಲ ಒಂದು ಸಮುದಾಯವನ್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಸೋಲಿಸುವಂತೆ ಮತದಾರರಿಗೆ ಮನವಿ ಮಾಡಿದರು.
ಬಜರಂಗ ದಳ ರಾಷ್ಟ್ರೀಯ ಸಂಘಟನೆ ಮತ್ತು ಸೇವಾ ಮನೋಭಾವನೆ ಇರುವ ಸಂಘಟನೆಯಾಗಿದೆ. ಯಾವುದೇ ದೇಶದ್ರೋಹ ಕೆಲಸ ಮಾಡುತ್ತಿಲ್ಲ. ಬದಲಾಗಿ ದೇಶರಕ್ಷಣೆ ಮಾಡುವ ಸಂಘಟನೆಯಾಗಿದೆ. ದೇಶದ್ರೋಹಿ ಪಿಎಫ್‌ಐ ಸಂಘಟನೆ ಜೊತೆ ಬಜರಂಗದಳ ಸಂಘಟನೆಯನ್ನು ಹೋಲಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.