ಮತದಾನದತ್ತ ಈಗ ಜಿಲ್ಲಾಡಳಿತದ ಚಿತ್ತ
ದಾವಣಗೆರೆ, ಏ. 27 – ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳಿಸಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದೆ. ಈಗ ಜಿಲ್ಲಾಡಳಿತ ಮತದಾನದತ್ತ ಗಮನ ವಹಿಸಲಿದೆ.
ಅಂತಿಮ ಪರಿಷ್ಕರಣೆ ನಂತರ ಜಿಲ್ಲೆಯಲ್ಲಿ 14.42 ಲಕ್ಷ ಮತದಾರರನ್ನು ಗುರುತಿಸಲಾಗಿದೆ. ಇವರಿಗಾಗಿ 1,685 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ 339 ಅನ್ನು ಕ್ರಿಟಿಕಲ್ ಎಂದು ಗುರುತಿಸಲಾಗಿದೆ. ಜಿಲ್ಲೆಯ 7,21,964 ಪುರುಷ 7,20,004 ಮಹಿಳೆ, 118 ಇತರೆ ಹಾಗೂ 467 ಸೇವಾ ಮತದಾರರೂ ಸೇರಿದಂತೆ 14,42,223 ಮತದಾರರು ಮತದಾನದ ಅರ್ಹತೆ ಪಡೆದುಕೊಂಡಿದ್ದಾರೆ.
80 ವರ್ಷ ಮೀರಿದವರು ಹಾಗೂ ವಿಕಲಚೇತನರು ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಇವರು ಮತಗಟ್ಟೆಯಲ್ಲಿ ಮತದಾನ ನಡೆಯುವ ಮೊದಲೇ ಮತ ಚಲಾಯಿಸಲಿದ್ದಾರೆ. ಏ.29ರಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಮೊದಲ ಮತ ಹೊನ್ನಾಳಿಯಿಂದಲೇ ಬರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಕಳೆದ ಜನವರಿ 6ರಿಂದ ಏಪ್ರಿಲ್ 20ರವರೆಗೆ ಮತದಾರರ ಪಟ್ಟಿ ನಿರಂತರ ಪರಿಷ್ಕರಿಸಲಾಗಿದ್ದು, ಒಟ್ಟು 38,209 ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.
2,380 ಜನರಿಂದ ಮನೆಯಲ್ಲೇ ಮತದಾನ
80 ವರ್ಷ ಮೀರಿದವರು ಹಾಗೂ ವಿಕಲ ಚೇತನರು ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊ ಟ್ಟಿದೆ. ಅದರಂತೆ 2,380 ಜನರು ಮನೆಯಿಂದಲೇ ಮತದಾನ ಮಾಡಲು ನಿರ್ಧರಿಸಿದ್ದಾರೆ.
1,870 ಹಿರಿಯರು ಹಾಗೂ 510 ವಿಕಲಚೇತನರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ಇವರಿಗಾಗಿ ಮತದಾನ ಅಧಿಕಾರಿ, ಸೂಕ್ಷ್ಮ ಪರಿವೀಕ್ಷಕ, ಮತಗಟ್ಟೆ ಅಧಿಕಾರಿ, ಓರ್ವ ಪೊಲೀಸ್, ಓರ್ವ ಗ್ರೂಪ್ ಡಿ ನೌಕರ ಹಾಗೂ ಒಬ್ಬ ವಿಡಿಯೋಗ್ರಾಫರ್ಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 6 ಸದಸ್ಯರಿರುವ ಒಟ್ಟು 87 ತಂಡಗಳನ್ನು ರಚಿಸಲಾಗಿದೆ.
ಈ ತಂಡದವರು ಏ.29ರಿಂದ ಮನೆ ಮನೆಗೆ ತೆರಳಿ ಮತದಾನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ. ಏ.29 ಹಾಗೂ 30ರಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಮೇ 10 ರಂದು ಶುಷ್ಕ ದಿನ
ಮೇ 10ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಬೆಳಿಗ್ಗೆ 6 ಗಂಟೆಯವರೆಗೆ ಶುಷ್ಕ ದಿನ ಘೋಷಿಸಲಾಗಿದೆ. ಮತ ಎಣಿಕೆಯ ಹಿನ್ನೆಲೆಯಲ್ಲಿ ಮೇ 13ರ ಬೆಳಿಗ್ಗೆ 6 ಗಂಟೆ ಯಿಂದ ಮೇ 16ರ ಬೆಳಿಗ್ಗೆ 6 ಗಂಟೆಯವರೆಗೆ ಶುಷ್ಕ ದಿನ ಇರಲಿದೆ. ಈ ಅವಧಿಯಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ.
ಮತಪತ್ರ ಅಳವಡಿಕೆ : ಚುನಾವಣೆಗಾಗಿ ಒಟ್ಟು 2,029 ಮತ ಯಂತ್ರಗಳು, 2,029 ನಿಯಂತ್ರಣ ಘಟಕಗಳು ಹಾಗೂ 2,194 ವಿವಿ ಪ್ಯಾಟ್ಗಳನ್ನು ವಿತರಿಸಲಾಗುವುದು. ಏಪ್ರಿಲ್ 30ರಂದು ವೀಕ್ಷಕರು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಮತ ಯಂತ್ರಗಳ ರಾಂಡಮೈಜೇಷನ್ ಕೈಗೊಳ್ಳಲಾಗುವುದು. ಮೇ 1 ಹಾಗೂ 2ರಂದು ಮತ ಯಂತ್ರಗಳಿಗೆ ಮತ ಪತ್ರಗಳ ಅಳವಡಿಕೆ ಕಾರ್ಯ ನಡೆಸಲಾಗುವುದು ಎಂದವರು ತಿಳಿಸಿದರು.
ಮತಗಟ್ಟೆ ವಿವರ : ಏ.30ರಂದು ಜಿಲ್ಲಾದ್ಯಂತ ಏಕಕಾಲದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಕಾರ್ಯಕ್ರಮ ಆಯೋಜಿಸಲಾಗುವುದು. ‘ಪ್ರಜಾ ಪ್ರಭುತ್ವದ ಹಬ್ಬು ಮೇ 10 ಮತದಾನ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಯ ಲಿದೆ. ಈ ಕಾರ್ಯಕ್ರಮದ ಮೂಲಕ ಮತದಾರರಿಗೆ ತಾವು ಮತ ಚಲಾಯಿಸುವ ಮತಗಟ್ಟೆ ಯಾವುದು ಎಂಬುದನ್ನು ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಾಪಶಿ ತಿಳಿಸಿದರು.
ಮದ್ಯ – ಹಣ ವಶ : ಜಿಲ್ಲೆಯಲ್ಲಿ ಇದುವರೆಗೂ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ 2.42 ಕೋಟಿ ರೂ. ಮೌಲ್ಯದ ಮದ್ಯ ಹಾಗೂ 94.74 ಲಕ್ಷ ರೂ. ನಗದು ಹಾಗೂ 71,610 ರೂ.ಗಳ ಮಾದಕ ವಶಪಡಿಸಿಕೊಳ್ಳಲಾಗಿದೆ. 84.98 ಲಕ್ಷ ರೂ. ಮೌಲ್ಯದ ಇತರೆ ಸರಕುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದುವರೆಗೂ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ವಶಪಡಿಸಿಕೊಳ್ಳಲಾದ ಸರಕು ಹಾಗೂ ನಗದಿನ ಒಟ್ಟು ಮೌಲ್ಯ 4.22 ಕೋಟಿ ರೂ. ಎಂದವರು ಹೇಳಿದರು.
ಚುನಾವಣೆಯ ಹಿನ್ನೆಲೆಯಲ್ಲಿ ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಸಂಜೆ 6 ಗಂಟೆಯವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು.