ದಾವಣಗೆರೆ, ಏ. 27- ಕಾಂಗ್ರೆಸ್ ನುಡಿದಂತೆ ಸರ್ಕಾರ ನಡೆಸಲಿದೆ ಎಂಬುದಕ್ಕೆ ರಾಜಸ್ತಾನದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 500 ರೂ.ಗೆ ಅಡುಗೆ ಅನಿಲ ಪೂರೈಸುತ್ತಿರುವುದೇ ಸಾಕ್ಷಿ ಎಂದು ಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ನೆಟ್ಟ ಡಿಸೋಜಾ ತಿಳಿಸಿದರು.
ನಗರದ ಭಾರತ್ ಕಾಲೋನಿಯ ಕರಿಬಸವೇಶ್ವರ ಮೈದಾನದಲ್ಲಿ ಗುರುವಾರ, ಕಾಂಗ್ರೆಸ್ ಮಹಿಳಾ ಘಟಕದಿಂದ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಶಾಮನೂರು ಶಿವಶಂಕ ರಪ್ಪ ಅವರ ಪರವಾಗಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡಿರುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಶೇ.50 ರಷ್ಟು ರಾಜಕೀಯ ಮೀಸಲಾತಿ ನೀಡಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಗಳಿಂದ ಕುಟುಂಬವನ್ನು ಸರಿಯಾಗಿ ನಿರ್ವಹಿಸಲಾಗದೆ, ಮಹಿಳೆಯರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರವಧಿಯಲ್ಲಿ 450 ರೂ.ಗೆ ಅಡುಗೆ ಅನಿಲ ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಿಲಿಂಡರ್ ದರ 1100 ರೂ. ದಾಟಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಾರಣದಿಂದ ಅಗತ್ಯ ವಸ್ತುಗಳ ಬೆಲೆ ಸಹ ಗಗನಮುಖಿಯಾಗಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿಯಾಗಿದೆ. ಬಿಜೆಪಿ ಸರ್ಕಾರ ಶೇ. 40ರಿಂದ 60 ರಷ್ಟು ಪರ್ಸೆಂಟ್ ಕಮೀಷನ್ ಸರ್ಕಾರವಾಗಿದೆ. ಕಾಂಗ್ರೆಸ್ ಜನರ ಉದ್ದಾರ ಮಾಡಿದ್ದರೆ, ಬಿಜೆಪಿ ಜನರನ್ನು ಲೂಟಿ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇವರಾಣೆಗೂ ಗ್ಯಾರಂಟಿ ಕಾರ್ಡ್‌ನಲ್ಲಿ ನೀಡಿರುವ ಆಶ್ವಾಸನೆ ಈಡೇರಿಸಿಯೇ ತಿರುತ್ತೇವೆ ಎಂದರು.
ಈ ವೇಳೆ ಕಾಂಗ್ರೆಸ್ ಮಹಿಳಾ ಘಟಕದ ಡಾ. ಸೀಮಾ, ಪ್ರಣತಿ ಆಜಾದ್, ಡಾ.ವಿಜಯಾ, ಅನಿತಾ ಮಾಲತೇಶ್, ಮೀನಾಕ್ಷಿ ಜಗದೀಶ್ ಮತ್ತಿತರರಿದ್ದರು.