ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವಾಸವಾಂಬ ಜಯಂತ್ಯೋತ್ಸವವು ನಿನ್ನೆ ಆರಂಭವಾಗಿದ್ದು, ಇದೇ ದಿನಾಂಕ 30ರವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ತಿಳಿಸಿದ್ದಾರೆ. ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಶ್ರೀ ಅಮ್ಮನವರಿಗೆ ಕುಂಕುಮಾರ್ಚನೆ, ಮಂಗಳಾರತಿ, ತೀರ್ಥ – ಪ್ರಸಾದ ವಿನಿಯೋಗ ನಡೆಯಲಿದ್ದು, ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಇಂದು ಸಂಜೆ 6.30 ಕ್ಕೆ ವಾಸವಿ ಕ್ಲಬ್ ಇವರಿಂದ ಹಳ್ಳಿ ಸೊಬಗು ಕಾರ್ಯಕ್ರಮ ನೆರವೇರಲಿದೆ.
ನಾಳೆ ಶುಕ್ರವಾರ ಸಂಜೆ 6 ರಿಂದ ವಾಸವಿ ಮಹಿಳಾ ಸಂಘ, ವಾಸವಿ ಯುವತಿಯರ ಸಂಘ ಮತ್ತು ವಾಸವಿ ಭಜನಾ ಮಂಡಳಿ ಇವರಿಂದ ಅಮ್ಮನವರಿಗೆ 108 ವಿವಿಧ ಭಕ್ಷ್ಯಗಳಿಂದ ವಿಶೇಷ ನೈವೇದ್ಯ, ಆರ್ಯವೈಶ್ಯ ಭಕ್ತಾದಿಗಳು ತಂದಂತಹ ವಿವಿಧ ಭಕ್ಷಗಳನ್ನು ಅಮ್ಮನವರಿಗೆ ಸಂಕಲ್ಪ ಪೂರ್ವಕದೊಂದಿಗೆ ತಮ್ಮ ಸ್ವಹಸ್ತದಿಂದ ಅರ್ಪಿಸಲು ಅವಕಾಶ ಕಲ್ಪಿಸಲಾಗಿದ್ದು, ವಿವರಗಳಿಗೆ ಶ್ರೀಮತಿ ಕವಿತಾ ಕೃಷ್ಣಮೂರ್ತಿ (99358 00504) ಅವರನ್ನು ಸಂಪರ್ಕಿಸಬಹುದಾಗಿದೆ.
ಸಂಜೆ 6.30ಕ್ಕೆ ವಾಸವಿ ಮಹಿಳಾ ಸಂಘ ಮತ್ತು ವಾಸವಿ ಯುವತಿಯರ ಸಂಘ ಇವರಿಂದ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ವೇಷಭೂಷಣದೊಂದಿಗೆ ಕನ್ನಿಕೆಯರ ಪೂಜೆ 5 ವರ್ಷದಿಂದ 10 ವರ್ಷದ ಮಕ್ಕಳಿಗೆ ನಡೆಯಲಿದೆ. ವಿವರಗಳಿಗೆ ಶ್ರೀಮತಿ ಕವಿತಾ ಕೃಷ್ಣಮೂರ್ತಿ (99458 00504) ಅವರನ್ನು ಸಂಪರ್ಕಿಸಬಹುದಾಗಿದೆ.