ದಾವಣಗೆರೆ, ಏ.18- ಮಾಯಕೊಂಡ ಮೀಸಲು (ಎಸ್‌ಸಿ) ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯಗಾರರ ಒಕ್ಕೂಟದ ಅಭ್ಯರ್ಥಿ ಆರ್.ಎಲ್.ಶಿವಪ್ರಕಾಶ್ ಅವರು ನಾಳೆ ದಿನಾಂಕ 19 ರ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಎಚ್.ಕೆ. ಬಸವರಾಜ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಘೋಷಿತ ಬಸವರಾಜ ನಾಯ್ಕ ನಾಮಪತ್ರ ಸಲ್ಲಿಕೆಗೂ ಮುನ್ನ ಕ್ಷೇತ್ರದ ಆಕಾಂಕ್ಷಿಗಳ ಜೊತೆಗೆ ಮಾತನಾಡಿ ಹೊಸ ಮುಖಗಳಿಗೆ ಆದ್ಯತೆ ನೀಡುವುದಾಗಿ ವರಿಷ್ಠರು ತಿಳಿಸಿದ್ದರು. ನಾವು ಕೂಡ ಇದಕ್ಕೆ ಸಮ್ಮತಿಸಿ ಸುಮ್ಮನಿದ್ದೆವು. ಆದರೆ, ಮಂಗಳವಾರ ಏಕಾಏಕಿ ಬಸವರಾಜ ನಾಯ್ಕ್ ಅವರು ನಾಮಪತ್ರ ಸಲ್ಲಿಸಿದ್ದು, ಈ ಮೂಲಕ ವರಿಷ್ಠರು ಮಾತು ತಪ್ಪಿದ್ದಾರೆ ಎಂದರು.
ಈಗಾಗಲೇ ಬಸವರಾಜ ನಾಯ್ಕ ಅವರಿಗೆ ನೀಡಿರುವ ಬಿ.ಫಾರಂ ಅನ್ನು ರದ್ದುಪಡಿಸಿ, 8 ಜನ ಬಂಡಾಯಗಾರರ ಪೈಕಿ ಯಾರೊಬ್ಬರಿಗಾದರೂ ಸಿ ಫಾರಂ ನೀಡಿದರೆ, ನಾವು ಬಂಡಾಯ ವಾಪಾಸ್ ಪಡೆಯುತ್ತೇವೆ. ಇಲ್ಲವಾದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಮಂಜಾನಾಯ್ಕ್ ಮಾತನಾಡಿ, ಕಣದಿಂದ ಹಿಂದಕ್ಕೆ ಸರಿಯುವಂತೆ ಆಮಿಷ, ಬೆದರಿಕೆ ಒಡ್ಡಲಾಗುತ್ತಿದೆ. ನಾವು ರಾಜೀಯಾಗಿದ್ದೇವೆ ಎಂದು ಅಪ ಪ್ರಚಾರ ಮಾಡಲಾಗುತ್ತಿದೆ. ಆದರೆ ನಾವು 8 ಜನರು ಒಟ್ಟಿಗೆ ಇದ್ದೇವೆ. ದಿಶಾ ಸಮಿತಿ ಸದಸ್ಯರಾಗಿರುವ ವೆಂಕಟೇಶ್ ಮತ್ತು ಕೌಟುಂಬಿಕ ಕಾರಣಗಳಿಂದ ಶ್ಯಾಮ್ ಹೊರಗಿದ್ದಾರೆ. ಉಳಿದಂತೆ ನಾವು 8 ಜನರು ಒಟ್ಟಾಗಿದ್ದೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಆಕಾಂಕ್ಷಿಗಳಾದ ಹನುಮಂತನಾಯ್ಕ, ಆರ್.ಎಲ್.ಶಿವಪ್ರಕಾಶ್, ರಮೇಶ್ ನಾಯ್ಕ್, ಆಲೂರು ಲಿಂಗರಾಜ್, ಮೋಹನ್ ಕುಮಾರ್, ಅನಿಲ್ ಕುಮಾರ್ ಮತ್ತಿತರರಿದ್ದರು.