ದಾವಣಗರೆ, ಏ. 14- ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಂಡಾಯ ಎದ್ದಿರುವ 11 ಜನ ಆಕಾಂಕ್ಷಿಗಳು ಒಟ್ಟಾಗಿ ಆರ್.ಎಲ್. ಶಿವಪ್ರಕಾಶ್ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಂಡಾಯ ಅಭ್ಯರ್ಥಿಯೂ ಆಗಿರುವ ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಹೆಚ್.ಕೆ. ಬಸವರಾಜ್, ಹೊಸಬರಿಗೆ ಟಿಕೆಟ್ ನೀಡದ ಮುಖಂಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಆರಂಭದ ದಿನಗಳಿಂದಲೂ ನಾವು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆವು. ಹೊಸ ಮುಖಗಳಿಗೆ ಆದ್ಯತೆ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಆದರೆ ಇದೀಗ ಮಾಜಿ ಶಾಸಕ ಬಸವರಾಜ ನಾಯ್ಕ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ನಮಗೆ ಅಸಮಾಧಾನ ತಂದದೆ.
ಈ ಹಿನ್ನೆಲೆಯಲ್ಲಿ ಮಾಯಕೊಂಡ ಕ್ಷೇತ್ರದ 11 ಜನ ಬಿಜೆಪಿ ಆಕಾಂಕ್ಷಿಗಳೆಲ್ಲರೂ ಒಟ್ಟಾಗಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರೂ, ಮಹಾನಗರ ಪಾಲಿಕೆ ಸದಸ್ಯರೂ ಆಗಿರುವ ಆರ್.ಎಲ್. ಶಿವಪ್ರಕಾಶ್ ಅವರನ್ನು ಕಣಕ್ಕಿಳಿಸಲಿದ್ದೇವೆ.
ಎಲ್ಲರೂ ಅವರ ಗೆಲುವಿಗೆ ಒಟ್ಟಾಗಿ ಶ್ರಮಿಸಿ, ಮತ್ತೆ ಬಿಜೆಪಿಗೇ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.
ಲಂಬಾಣಿ, ಮಾದಿಗ, ಚೆಲುವಾದಿ, ಭೋವಿ ಸೇರಿದಂತೆ ಈ ನಾಲ್ಕೂ ಜನಾಂಗಗಳಲ್ಲಿ ಯಾರೊಬ್ಬರಿಗಾದರೂ ಹೊಸಬರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು.
ಆದರೆ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ವರಿಷ್ಠರು ಎಡವಿದ್ದಾರೆ. ನಾಯಕರೊಬ್ಬರ ಶಿಫಾರಸ್ಸಿನ ಮೇಲೆಯೇ ಅವರಿಗೆ ಟಿಕೆಟ್ ದೊರೆತಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಜಿ.ಮಂಜಾನಾಯ್ಕ ಮಾತನಾಡಿ, ಪಕ್ಷದ ವರಿಷ್ಠರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಹೀನಾಯವಾಗಿ ಸೋತು, 2018ರಲ್ಲಿ ಟಿಕೆಟ್ ಕೊಡದ ಕಾರಣಕ್ಕಾಗಿ ವರಿಷ್ಠರನ್ನು ನಿಂದಿಸಿ, ಜೆಡಿಎಸ್ ಪಕ್ಷ ಸೇರಿ ಮತ್ತೆ ಬಿಜೆಪಿಗೆ ಬಂದು ಲಾಭಿ ಮಾಡಿದ ವ್ಯಕ್ತಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಎಲ್. ಶಿವಪ್ರಕಾಶ್, ಎನ್. ಹನುಮಂತನಾಯ್ಕ, ಬಿ.ರಮೇಶ್ ನಾಯ್ಕ, ಮೋಹನ್ ಕುಮಾರ್, ಆಲೂರು ನಿಂಗರಾಜ್, ಗಂಗಾಧರ್, ಶಶಿ ಇತರರು ಉಪಸ್ಥಿತರಿದ್ದರು.