ವರಿಷ್ಠರ ನೈತಿಕತೆ ಅನುಮಾನಿಸಿದ ಆಕಾಂಕ್ಷಿಗಳು
ರಾಣೇಬೆನ್ನೂರು, ಏ. 13 – ಇಂದು ಪ್ರತ್ಯೇಕ ಸುದ್ದಿಗೋಷ್ಠಿ ಕರೆದಿದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಸಚಿವ ಆರ್. ಶಂಕರ್ ಹಾಗೂ ವಾಯುವ್ಯ ರಸ್ತೆ ಸಾರಿಗೆ ನಿರ್ದೇಶಕ ಸಂತೋಷ ಪಾಟೀಲ ಅವರು, ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರು ಮಾಡಿದ ಪಕ್ಷ ದ್ರೋಹ, ಭ್ರಷ್ಟಾ ಚಾರ, ಸಮಾಜ ಘಾತುಕ ಕಾರ್ಯ ಗಳ ಬಗ್ಗೆ ಅತ್ಯಂತ ಕಠೋರವಾಗಿ ಪ್ರಸ್ತಾಪಿಸಿ ಪಕ್ಷದ ಮುಖಂಡರ ಕಾರ್ಯವೈಖರಿ ಬಗ್ಗೆ ಅನುಮಾನದ ಅಸಮಾಧಾನ ವ್ಯಕ್ತಪಡಿಸಿದರು.
ಮನೆಯಲ್ಲಿಯೇ ಕುಳಿತು ಓಸಿ ಮಟಕಾ ಬರೆಸುವುದು, ಕಳಪೆ ಕಾಮಗಾರಿ, ಎಲ್ಲ ಹಂತಗಳಲ್ಲೂ ಕಮೀಷನ್ ಭ್ರಷ್ಟಾ ಚಾರದ ಮೂಲಕ ಮೂರು ವರ್ಷ ಗಳಲ್ಲಿ ನೂರಾರು ಕೋಟಿ ಹಣ ಮಾಡಿದ ಶಾಸಕರು ಮತ್ತೆ ಮತ ಕೇಳಲು ಬರುತ್ತಿದ್ದಾರೆ, ಆದರೆ ಕ್ಷೇತ್ರದ ಜನತೆ ಅವರನ್ನು ಮತ್ತೆ ಇಟ್ಟಂಗಿ ಭಟ್ಟಿಗೆ ಕಳಿಸಲಿದ್ದಾರೆ ಎಂದು ಹೇಳಿದ ಶಂಕರ್, ಪ್ರಾಮಾಣಿಕವಾಗಿ ಜನಸೇವೆ ಮಾಡುವ ನನಗೆ ಎಲ್ಲ ಹಂತದಲ್ಲೂ ನೋವು ನೀಡಿ ಬಕೆಟ್ ಹಿಡಿದ ವರಿಗೆ ಟಿಕೆಟ್ ನೀಡಲಾಗಿದೆ ಎಂದು ವರಿಷ್ಠರ ನಡೆಯನ್ನು ಹಿಯಾಳಿಸಿದರು.
ನಾನು ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಅರಿವಿದೆ. ಅದನ್ನು ಸರಿಪಡಿಸಿಕೊಂಡು ಕ್ಷೇತ್ರದ ಜನರ ಸೇವೆ ಮಾಡಿ ನನ್ನ ಕನಸಿನಂತೆ ಮಾದರಿ ಕ್ಷೇತ್ರ ಮಾಡಲು ಜನತೆ ನನಗೆ ಜಯ ತಂದುಕೊಡಲಿದ್ದಾರೆಂದರು.
ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಪಕ್ಷವನ್ನು ಕಟ್ಟಲಾಗಿದ್ದು ಆ ಪಕ್ಷದ ಸಿದ್ಧಾಂತವನ್ನು ಸಂಪೂರ್ಣ ಹಾಳುಮಾಡಿ, ಸಂಘ ಪರಿವಾರದವರ ಮೇಲೆಯೆ ಕೇಸ್ ಹಾಕಿಸಿ ಪಕ್ಷ ವಿರೋಧಿ ನಿಲುವಿನ ಅರುಣಕುಮಾರ ಅವರಿಗೆ ಟಿಕೆಟ್ ಕೊಡದಂತೆ ಆಕಾಂಕ್ಷಿಗಳೆಲ್ಲರೂ ವರಿಷ್ಠರಿಗೆ ಮನವಿ ಮಾಡಿದ್ದರೂ ಸಹ ಮತ್ತೆ ಅವರಿಗೆ ಟಿಕೆಟ್ ನೀಡಿರುವುದು ನೇತಾರರ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಸಾರಿಗೆ ಸಂಸ್ಥೆ ನಿರ್ದೇಶಕ ಸಂತೋಷ ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಈ ನಡೆಯಿಂದ ಬೇಸರಗೊಂಡಿರುವ ಸಮಾರು 150 ಕ್ಕೂ ಹೆಚ್ಚು ಬಿಜೆಪಿಯ ವಿವಿಧ ಪದಾಧಿಕಾರಿಗಳು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡಲಿದ್ದೇವೆ ಎಂದು ತಿಳಿಸಿದ ಸಂತೋಷ ಪಾಟೀಲ, ಕಳೆದ ಮೂರು ವರ್ಷಗಳಿಂದ ನವಯುಗ ಬಳಗದೊಂದಿಗೆ ತಾಲ್ಲೂ ಕಿನ ಜನರ ನೋವು-ನಲಿವುಗಳಿಗೆ ಸ್ಪಂದಿಸಿದ್ದೇನೆ. ಜಿ.ಪಂ. ಸದಸ್ಯನಾಗಿ ಆ ಭಾಗದ ಜನರ ಸೇವೆಯಲ್ಲಿ ಪ್ರೀತಿ ಗಳಿಸಿಕೊಂಡಿದ್ದೇನೆ. ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಜನತೆ ಆಶೀರ್ವದಿಸಲಿದ್ದಾರೆ ಎನ್ನುವ ನಂಬಿಕೆ ವ್ಯಕ್ತಪಡಿಸಿದರು.