ದಾವಣಗೆರೆ, ಏ. 12 – ಬರುವ ವಿಧಾನಸಭಾ ಚುನಾವಣೆಗೆ ನಾಳೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ರಜಾ ದಿನಗಳಾದ ಏಪ್ರಿಲ್ 14 ಹಾಗೂ 16 ಹೊರತು ಪಡಿಸಿ ಉಳಿದ ದಿನಗಳಂದು ಪ್ರತಿದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಕೆಗೆ ಏ.20ರ ಗುರುವಾರ ಕೊನೆಯ ದಿನ ಎಂದರು.
ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಿಗೆ ಪಾಲಿಕೆಯಲ್ಲಿ, ಮಾಯಕೊಂಡಕ್ಕೆ ದಾವಣಗೆರೆ ತಹಶೀಲ್ದಾರ್ ಕಚೇರಿಯಲ್ಲಿ, ಜಗಳೂರಿಗೆ ತಾಲ್ಲೂಕು ಕಚೇರಿ, ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ಕ್ಷೇತ್ರಗಳಿಗೆ ಸಂಬಂಧಿಸಿದ ತಹಶೀಲ್ದಾರ್ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಬಹುದು ಎಂದರು.
80 ಮೀರಿದವರಿಂದ ಮತಗಟ್ಟೆಯಲ್ಲೇ ಮತದಾನಕ್ಕೆ ಒಲವು
ಜಿಲ್ಲೆಯಲ್ಲಿ 80 ವರ್ಷ ಮೀರಿದ ಹಾಗೂ ವಿಕಲಚೇತನರಾದ ಒಟ್ಟು 46,790 ಮತದಾರರನ್ನು ಗುರುತಿಸಲಾಗಿದೆ. ಇವರು ಮನೆಗಳಲ್ಲೇ ಮತದಾನ ಮಾಡಲು 12ಡಿ ಫಾರಂಗಳನ್ನು ವಿತರಿಸಲಾಗು ತ್ತಿದೆ. ಇದುವರೆಗೂ 43,643 ಜನರಿಗೆ ಫಾರಂ ವಿತರಿಸಿದ್ದು, 3,147 ಮತದಾರರು ಅವರ ವಿಳಾ ಸಗಳಲ್ಲಿ ದೊರೆತಿಲ್ಲ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ಏ.17ರವರೆಗೆ ಇವರು ಮನೆಗಳಿಂದಲೇ ಮತದಾನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಇದುವರೆಗೂ ಬಂದಿರುವ ಮಾಹಿತಿಯ ಪ್ರಕಾರ 80 ವರ್ಷದ ಮೀರಿದವರಲ್ಲಿ ಬಹುತೇಕರು ಮತಗಟ್ಟೆಗೇ ತೆರಳಿ ಮತದಾನ ಮಾಡಲು ಬಯಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಇದುವರೆಗೂ 7,18,953 ಪುರುಷ, 7,16,640 ಮಹಿಳೆ, 116 ತೃತೀಯ ಲಿಂಗಿ ಹಾಗೂ 466 ಸೇವಾ ಮತದಾರರೂ ಸೇರಿದಂತೆ 14,36,175 ಮತದಾರರನ್ನು ಗುರುತಿಸಲಾಗಿದೆ. ಮತಪಟ್ಟಿಗೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸುವ ಅವಧಿ ಮುಗಿದಿದ್ದು, ಅಂತಿಮ ಮತದಾರರ ಪಟ್ಟಿ ಏ.20ರ ವೇಳೆಗೆ ಸಿದ್ಧವಾಗಲಿದೆ ಎಂದವರು ಹೇಳಿದರು.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1,685 ಮತಗಟ್ಟೆಗಳನ್ನು ರೂಪಿಸಲಾಗುವುದು. ಈ ಪೈಕಿ 869 ಮತಗಟ್ಟೆಗಳ ಮತದಾನ ಪ್ರಕ್ರಿಯೆಯನ್ನು ವೆಬ್ ಕಾಸ್ಟಿಂಗ್ ಮೂಲಕ ನೇರ ಪ್ರಸಾರ ಮಾಡಲಾಗುವುದು. ಈ ಹಿಂದೆ ಶೇ.10-15ರಷ್ಟು ಮತಗಟ್ಟೆಗಳ ನೇರ ಪ್ರಸಾರ ಇರುತ್ತಿತ್ತು. ಈ ಬಾರಿ ಶೇ.50 ಮತಗಟ್ಟೆಗಳ ನೇರ ಪ್ರಸಾರ ಮಾಡಲಾಗುವುದು ಎಂದರು. ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ನೀಡಲಾಗಿದೆ. ಏ.30ರಂದು ಎರಡನೇ ಹಂತದ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಈವರೆಗೆ 55,039 ಮತದಾರರ ಪಿ.ವಿ.ಸಿ. ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಇನ್ನೂ 11,776 ಚೀಟಿಗಳನ್ನು ಮುದ್ರಿಸಲಾಗುತ್ತಿದ್ದು, ಏ.25ರ ಒಳಗೆ ವಿತರಿಸಲಾಗುವುದು ಎಂದು ತಿಳಿಸಿದರು.