ದಾವಣಗೆರೆ, ಏ.12- ಸಾರ್ವ ತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ದಂತೆ ಮತದಾರರಿಗೆ ಸಹಾಯ ಮತ್ತು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಮಾದರಿ ನೀತಿ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧೆಡೆ ಚೆಕ್‍ಪೋಸ್ಟ್‍ಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಅದರಂತೆ ಎಲ್ಲಾ ತಾಲ್ಲೂಕುಗಳಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ಸಾರ್ವಜನಿಕರ ಮಾಹಿತಿಗೆ ಸಹಾಯವಾಣಿ ಹಾಗೂ ಟೋಲ್‍ಫ್ರೀ ನಂಬರ್‍ಗಳ ಮೂಲಕ ನಿಯಂತ್ರಿಸಲಾಗುತ್ತಿದೆ.
ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, 1950 ಮತ್ತು 18004251342 ಟೋಲ್‍ಫ್ರೀ ನಂಬರ್‍ಗಳ ಮೂಲಕ ಸಾರ್ವಜನಿಕರಿಂದ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಮಾ.29 ರಿಂದ ಏಪ್ರಿಲ್ 12 ರ ವರೆಗೆ ಒಟ್ಟು 228 ದೂರುಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯ ಮಾಹಿತಿ, ಮತದಾರರ ಹೆಸರು ಬದಲಾವಣೆ, ಚುನಾವಣಾ ಗುರುತಿನ ಚೀಟಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಸಿವಿಜಿಲ್ ಆಪ್ ಮೂಲಕವು ಚುನಾವಣೆ ಅಕ್ರಮಗಳ ಬಗ್ಗೆ ದೂರು ಸ್ವೀಕರಿಸಲಾಗುತ್ತಿದೆ. ಸಿವಿಜಿಲ್ ಸಿಟಿಜನ್ ಆಪ್ ಡೌನ್‍ಲೋಡ್ ಮಾಡಿಕೊಂಡು ಚುನಾವಣೆ ಅಕ್ರಮ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪೋಟೋ ಸಹಿತ ಮಾಹಿತಿ ಹಾಕಿದ 20 ನಿಮಿಷಗಳಲ್ಲಿ ಪರಿಹಾರ ದೊರಕಲಿದೆ. ಸಿವಿಜಿಲ್ ಆಪ್ ಮೂಲಕ ಸಾರ್ವಜನಿಕರು ನೇರವಾಗಿ ಪೋಟೋ, ವಿಡಿಯೋ ಮತ್ತು ಆಡಿಯೋ ಸೆರೆ ಹಿಡಿದು ಕಳುಹಿಸಿದ ತಕ್ಷಣ ನಿಯಂತ್ರಣ ಕೊಠಡಿಗೆ ತಲುಪಲಿದ್ದು, ಎಫ್.ಎಸ್.ಟಿ. ತಂಡವು 10 ನಿಮಿಷದೊಳಗಾಗಿ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳಲಿದ್ದು ಇದು ಸಿವಿಜಿಲ್‍ನ ವಿಶೇಷತೆಯಾಗಿದೆ.
ಜಿಲ್ಲೆಯಲ್ಲಿ ಸಿವಿಸಿಲ್ ಆಪ್ ಪರಿಶೀಲನೆಗೂ ಪ್ರತ್ಯೇಕ ತಂಡ ಕಾರ್ಯ ನಿರ್ವಹಿಸುತ್ತಿದೆ. ಇದುವರೆಗೂ 26 ದೂರುಗಳು ಸ್ವೀಕಾರವಾಗಿವೆ. ಅದರಲ್ಲಿ 12 ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ ಚಿನ್ಹೆ, ಮುಖಂಡರ ಭಿತ್ತಿಪತ್ರಗಳಿಗೆ ಸಂಬಂಧಿಸಿದ್ದಾಗಿದೆ. ಅವುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಪರಿಣಾಮಕಾರಿಯಾಗಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರು ಸಿವಿಜಿಲ್ ಆಪ್ ಡೌನ್‍ಲೋಡ್ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ ಇದನ್ನು ಸೆರೆ ಹಿಡಿದಲ್ಲಿ ಸಹಾಯಕವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.