ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಎಲ್ಲರೂ ಮತದಾನ ಮಾಡಬೇಕು

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕರೆ

ದಾವಣಗೆರೆ, ಏ.12- ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳುವ ಮುಖಾಂತರ ತಮ್ಮ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕರೆ ಕೊಟ್ಟರು.

ಬುಧವಾರ ನಗರದ ಹೈಸ್ಕೂಲ್‌ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ (ಸ್ವೀಪ್‌) ತ್ರಿಚಕ್ರ ಬೈಕ್‌ ರಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶವನ್ನು ಕಟ್ಟುವಲ್ಲಿ ವಿಕಲಚೇತನರ ಪಾತ್ರವೂ ಪ್ರಮುಖವಾಗಿದ್ದು, ವಿಶೇಷ ವಿಕಲಚೇತನರು ಕೂಡ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಅವರೂ ಸಹ ಪ್ರಜಾಪ್ರಭುತ್ವದ ಭಾಗವಾಗಿದ್ದಾರೆ. ಹಾಗಾಗಿ, ಮೇ 10 ರಂದು ನಡೆಯುವ   ವಿಧಾನಸಭಾ ಚುನಾವಣೆ ವೇಳೆ ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ, ಉತ್ತಮ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜೊತೆಗೆ, ಶೇ.100 ರಷ್ಟು ಮತದಾನಕ್ಕೆ ಸಹಕಾರ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸುರೇಶ್‌ ಇಟ್ನಾಳ್ ಮಾತನಾಡಿ, ಇದೇ ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆ ವೇಳೆ ವಿಕಲಚೇತನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತೊಂದರೆಯಾಗದಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿಕಲಚೇತನರಿಗೆ ರಾಂಪ್‌, ರೀಲಿಂಗ್ ಹಾಗೂ ಅಂಧರಿಗೆ ಬ್ರೈಲ್‌ ಲಿಪಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಮತಗಟ್ಟೆಗೆ ವಿಕಲಚೇತನರನ್ನು ಕರೆತರಲು ಮತ್ತು ವಾಪಾಸ್‌ ಕರೆದೊಯ್ಯಲು ಸಾರಿಗೆ ವ್ಯವಸ್ಥೆ, ಶೌಚಾಲಯ, ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದ ಅವರು, ಇದಕ್ಕೆ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿಯ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ನಿಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಜಿಲ್ಲಾ ಹಿರಿಯ ನಾಗರಿಕರ ಹಾಗೂ ವಿಶೇಷಚೇತನ ಮತದಾರರ ನೋಡೆಲ್‌ ಅಧಿಕಾರಿ ಡಾ.ಕೆ.ಕೆ. ಪ್ರಕಾಶ್‌, ಮಹೇಶ್‌ ದೊಡ್ಮನಿ, ಶಾರದಮ್ಮ, ಮಲ್ಲಾನಾಯ್ಕ್‌ ಸೇರಿದಂತೆ ಮತ್ತಿತರರಿದ್ದರು.

ತ್ರಿಚಕ್ರ ಬೈಕ್‌ ರಾಲಿಯು ಹೈಸ್ಕೂಲ್‌ ಮೈದಾನದಿಂದ ಪ್ರಾರಂಭವಾಗಿ ಜನತಾ ಬಜಾರ್‌ ರಸ್ತೆಯ ಮುಖಾಂತರ ಪಿ.ಬಿ ರಸ್ತೆ, ಗಾಂಧಿ ವೃತ್ತ, ಜಯದೇವ ವೃತ್ತ ಮಾರ್ಗವಾಗಿ ಡಾ.ಬಿ.ಆರ್‌ ಅಂಬೇಡ್ಕರ್‌ ವೃತ್ತ ತಲುಪಿ ಪ್ರತಿಜ್ಞೆ ಮಾಡುವ ಮೂಲಕ ಮುಕ್ತಾಯಗೊಂಡಿತು.

error: Content is protected !!