ದಾವಣಗೆರೆ, ಏ.12- ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ವರಿಷ್ಠರು, ಮುಖಂಡರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದರ ಪರಿಣಾಮ ಈಗಾ ಗಲೇ ಕಾಂಗ್ರೆಸ್ ಸರ್ವನಾಶವಾ ಗಿದೆ. ಈ ಚುನಾವಣೆಯಲ್ಲಿ ಯಾದರೂ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವತ್ತ ವರಿಷ್ಠರು ಕ್ರಮ ಕೈಗೊಳ್ಳದೇ ಹೋದರೆ, ಕಾಂಗ್ರೆಸ್ ಪಕ್ಷ ಅಧೋಗತಿಯತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಆಕಾಂಕ್ಷಿ, ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡದೇ ವಂಶ ರಾಜಕಾರಣಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿದೆ. ಒಂದೇ ಕುಟುಂಬಕ್ಕೆ 2 ಟಿಕೆಟ್ ನೀಡುತ್ತಿದೆ. ಅಧಿಕಾರ ಅನುಭವಿಸಿದವರಿಗೆ ಮತ್ತೆ ಅವಕಾಶ ನೀಡುತ್ತಿದೆ. ಟಿಕೆಟ್ ಪಡೆದು ಸೋತವರಿಗೂ ಮಣೆ ಹಾಕುತ್ತಿದೆ. ಒಬ್ಬರಿಗೆ ಹತ್ತಾರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದು, ನಿಷ್ಠಾವಂತ ಕಾರ್ಯಕರ್ತರಿಗೆ ಇದರಿಂದ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ, ಮೊನ್ನೆ ಪಕ್ಷಕ್ಕೆ ಬಂದವರಿಗೂ ಅಧಿಕಾರ ಸಿಗುತ್ತಿದೆ. 40-50 ವರ್ಷಗಳಿಂದ ಪಕ್ಷಕ್ಕೆ ದುಡಿದ ನಿಷ್ಠಾವಂತ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ಕಾಂಗೈ ನೀತಿ, ಸಿದ್ಧಾಂತ ಎಲ್ಲಿ ಹೋಗಿದೆ ? ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸಿದ್ಧಾಂತ ಕಾರ್ಯರೂಪಕ್ಕೆ ಬರದೇ ಬರೀ ಪುಸ್ತಕದ ಬದನೆಕಾಯಿ ಎಂಬಂತಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಅಗತ್ಯವಿದ್ದಾಗ ದುಡಿಸಿಕೊಂಡು ನಂತರ ಯಾವುದೇ ಸ್ಥಾನಮಾನ ನೀಡದೇ ನಮ್ಮನ್ನು ಕಡೆಗಣಿಸುತ್ತಾರೆ. ನಮ್ಮಂತಹ ಕಾರ್ಯಕರ್ತರಿಗೆ ಮೋಸವಾಗುತ್ತಿದೆ. ಅಧಿಕಾರವೆಲ್ಲಾ ಅವರಿಗೆ, ಕೆಲಸ ಕಾರ್ಯಗಳು ಮಾತ್ರ ನಮಗೆ ಎಂಬಂತಾಗಿದೆ. ಪಕ್ಷಕ್ಕೆ ಸೇರಿ 6 ತಿಂಗಳು 1 ವರ್ಷಕ್ಕೆ ನಾವೇನೂ ಸ್ಥಾನಮಾನ ಕೇಳುತ್ತಿಲ್ಲ. ಸತತವಾಗಿ ಕಳೆದ 40-50 ವರ್ಷಗಳಿಂದ ಪಕ್ಷದಲ್ಲಿದ್ದು ಸೇವೆ ಸಲ್ಲಿಸಿದ್ದೇವೆ. ಹಿರಿತನಕ್ಕಾದರೂ ಬೆಲೆ ಬೇಡವೇ? ಸಣ್ಣಪುಟ್ಟ ಸ್ಥಾನಮಾನವಾದರೂ ನೀಡಬೇಕೆಂಬ ಸೌಜನ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
40-50 ವರ್ಷಗಳಲ್ಲಿ ಒಮ್ಮೆಯೂ ಚುನಾ ವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದವರಿಗೆ, ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿಯೂ ಮಾಡದವರಿಗೆ, ಅವಕಾಶ ನೀಡಿ, ಕಾರ್ಯಕರ್ತರು ಕೆಲಸ ಮಾಡುವಂತೆ ಹುರಿದುಂಬಿಸಬೇಕು ಎಂದು ದುಗ್ಗಪ್ಪ ಆಶಯ ವ್ಯಕ್ತಪಡಿಸಿದ್ದಾರೆ.