ದಾವಣಗೆರೆ, ಮಾ.27- ರೈತಭವನದ ಕಾಂಪೌಂಡನ್ನು ಭಾನುವಾರ ಮಧ್ಯರಾತ್ರಿ ಎಪಿಎಂಸಿ ಅಧಿಕಾರಿಗಳ ಕುಮ್ಮಕ್ಕಿನಿಂದ ಗೂಂಡಾಗಳನ್ನು ಬಿಟ್ಟು ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳಿಂದ ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ರೈತ ಭವನದ ಮುಂಭಾಗದಲ್ಲಿ ಇಂದು ದಿಢೀರ್ ಪ್ರತಿಭಟನಾ ಧರಣಿ ನಡೆಸಲಾಯಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯಲ್ಲಿ ಬರುವ ರೈತ ಭವನದ ಆವರಣದಲ್ಲಿ ಲೀಜ್ ಕಂ ಸೇಲ್ ಆಧಾರದಲ್ಲಿ ವಿವಿಧ ವ್ಯಾಪಾರಿ ಗಳಿಗೆ ನೋಂದಣಿ ಮಾಡಿಕೊಟ್ಟಿರುವ ನಿವೇಶನ ಗಳನ್ನು ರದ್ದು ಪಡಿಸಬೇಕು ಹಾಗೂ ಕೂಡಲೇ ಯಥಾವತ್ತು ಮೊದಲು ಹೇಗಿತ್ತೋ ಹಾಗೆ ಕಾಂಪೌಂಡ್ ಸರಿಪಡಿಸುವಂತೆ ಆಗ್ರಹಿಸಿದರು.
ರೈತ ಭವನದ ಒಳಗಿನ ಖಾಲಿ ಸ್ಥಳವನ್ನು ನಿವೇಶನಗಳಾಗಿ ಲೀಜ್ ಕಂ ಸೇಲ್ ಆಧಾರದಲ್ಲಿ ಮಂಜೂರು ಮಾಡಿರುವುದನ್ನು ರದ್ದುಪಡಿಸಬೇಕು ಎಂದ ಅವರು, ರೈತ ಭವನ ಕಟ್ಟಡದಲ್ಲಿ ಈಗಾಗಲೇ ದಾವಣಗೆರೆ ತಹಶೀಲ್ದಾರ್ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ರೈತ ಭವನದ ಸುತ್ತ ತರಕಾರಿ, ಅಡಿಕೆ, ಬಾಳೆ, ಹೂವಿನ ವ್ಯಾಪಾರಸ್ಥರು ಮತ್ತು ಸಾರ್ವಜನಿಕರ ವಾಹನಗಳ ಓಡಾಟ ಮತ್ತು ನಿಲುಗಡೆಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ಕೂಡಲೇ ಪ್ರಾಮಾಣಿಕ ಅಧಿಕಾರಿಗಳ ತಂಡ ರಚಿಸಿ, ಮುಕ್ತ ತನಿಖೆ ನಡೆಸಿ ದಾವಣಗೆರೆ ಎಪಿಎಂಸಿ ಆಸ್ತಿಯನ್ನು ದುರ್ಲಾಭಕ್ಕೆ ಲೀಸ್ ಕಂ ಸೇಲ್ ಮಾಡಿರುವ ಅಧಿಕಾರಿಗಳು ಹಾಗೂ ರೈತಭವನದ ಕಾಂಪೌಂಡನ್ನು ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳಿಂದ ಧ್ವಂಸಗೊಳಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಗುಮ್ಮನೂರು ಬಸವರಾಜ, ಹುಚ್ಚವ್ವನಹಳ್ಳಿ ಪ್ರಕಾಶ್, ಹುಚ್ಚವ್ವನಹಳ್ಳಿ ಸಿದ್ದಪ್ಪ, ಅಂಜಿನಪ್ಪ, ಹೊನ್ನೂರು ರಾಜು, ಈಚಘಟ್ಟ ಕರಿಬಸಪ್ಪ, ಹನುಮಂತಪ್ಪ ಕೆಂಚನಹಳ್ಳಿ, ಆವರಗೆರೆ ರುದ್ರಮುನಿ, ಬಿ.ಎನ್ ಪಾಲಾಕ್ಷಿ, ಕೋಲ್ಕುಂಟೆ ಬಸವರಾಜ್, ಹುಚ್ಚೆಂಗೆಪ್ಪ ಮತ್ತಿತರರಿದ್ದರು.