ಬಿಐಇಟಿ ಕಾಲೇಜಿನ ನಮ್ಮ ದವನ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಅಥಣಿ ವೀರಣ್ಣ
ದಾವಣಗೆರೆ, ಮಾ. 27- 1979 ರಲ್ಲಿ ಸ್ಥಾಪಿತವಾದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ನಗರದ ಪ್ರಥಮ ಕಾಲೇಜಾಗಿದ್ದು, ಗುಣಮಟ್ಟದ ಬೋಧನೆಗೆ ಹೆಸರಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯ ಅಥಣಿ ಎಸ್. ವೀರಣ್ಣ ಹೇಳಿದರು.
ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕಾಲೇಜು ವತಿಯಿಂದ ಮೊನ್ನೆ ಏರ್ಪಾಡಾಗಿದ್ದ `ನಮ್ಮ ದವನ’- 23 ಎರಡನೇ ದಿನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವೀ ಜೀವನ ರೂಪಿಸಿಕೊಳ್ಳಲು ಕಂಪ್ಯೂಟರ್ ಜ್ಞಾನ, ಅಂತರ್ಜಾಲ ಬಳಕೆ ಬಗ್ಗೆ ಸಮಗ್ರ ಮಾಹಿತಿ ಅಗತ್ಯ ಎಂದರು.
ಸ್ಪರ್ಧಾತ್ಮಕ ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ವಿಜ್ಞಾನ ಸಹ ಬೆಳೆಯುತ್ತಾ ಹೋಗುತ್ತಿದೆ. ವಿದ್ಯಾರ್ಥಿಗಳು ವೇಗದ ಜಗತ್ತಿಗೆ ಹೊಂದಿಕೊಂಡು ವಿದ್ಯಾರ್ಥಿ ಜೀವನವನ್ನು ಯಶಸ್ವಿಯಾಗಿ ಸಾಗಿಸಬೇಕಾಗಿದೆ. ಬಿಐಇಟಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲೂ ಮತ್ತು ಹೊರ ರಾಜ್ಯಗಳಲ್ಲೂ ಯಾವುದೇ ಭೀತಿಯಿಲ್ಲದೇ ಉನ್ನತ ಹುದ್ದೆಗಳನ್ನು ಪಡೆದು ಜೀವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಹೆಚ್.ಬಿ. ಅರವಿಂದ್, ಎಸ್ಡಬ್ಲ್ಯೂಸಿ ಡೀನ್ ಡಾ. ಎಸ್.ಎನ್. ರಮೇಶ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಸಿ. ದೇವೇಂದ್ರಪ್ಪ, ಬಯೋಟೆಕ್ ವಿಭಾಗದ ಮುಖ್ಯಸ್ಥ ಡಾ. ಜಿ.ಪಿ. ದೇಸಾಯಿ, ಸಿಎಸ್ ಅಂಡ್ ಇ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಬಿ. ಮಲ್ಲಿಕಾರ್ಜುನ್, ಪ್ರೊ. ಭಾಗ್ಯ ಶಾಂತಕುಮಾರ್, ಪ್ರೊ. ವಸುದೇವ್ ನಾಯಕ, ಪ್ರೊ. ಕರಿಬಸವರಾಜ್, ಡಾ. ವಿನುತ, ಎಂ.ಸಿ. ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.
`ದಾವಣಗೆರೆ ಹೆಮ್ಮೆ ನಮ್ಮ ದವನ’ ಕುರಿತು ಡಾ. ಕೆ. ಗಣೇಶ್ ಕವನ ವಾಚಿಸಿದರು.