ದಾವಣಗೆರೆ, ಮಾ. 27- ಪಾನ್ ಕಾರ್ಡ್ಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ಕೇಂದ್ರ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆ ಶುಲ್ಕ ಕಟ್ಟುವಂತೆ ಆದೇಶ ಹೊರಡಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಪಿ.ಜೆ.ಬಡಾವಣೆಯ ದಾವಣಗೆರೆ ಓನ್ ಕೇಂದ್ರದ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆ ವಿರುದ್ಧ ಘೋಷಣೆ ಹಾಕಿದರು.
ಪಾಲಿಕೆ ಸದಸ್ಯ ಎ.ನಾಗರಾಜ್ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆಯ ಆದೇಶದಿಂದ ಬಿಪಿಎಲ್ ಕಾರ್ಡ್ದಾರರಿಗೆ ಅನಾನುಕೂಲವಾಗಲಿದೆ ಎಂದು ದೂರಿದರು.
ಪಾನ್ ಕಾರ್ಡ್ಗೆ ಆಧಾರ್ ಜೋಡಣೆ ಹೆಸರಿನಲ್ಲಿ 1 ಸಾವಿರ ಶುಲ್ಕವನ್ನು ವಿಧಿಸಲಾಗುತ್ತಿದೆ. ಏ.1ರ ನಂತರ ಹತ್ತು ಸಾವಿರ ಎಂದು ಆದಾಯ ತೆರಿಗೆ ಇಲಾಖೆ ಆದೇಶ ಮಾಡಿರುವುದನ್ನು ಖಂಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಆದಾಯ ತೆರಿಗೆ ಇಲಾಖೆಯೂ ಪಾನ್ ಕಾರ್ಡ್ ಮಾಡುವ ವೇಳೆಯೇ ಆಧಾರ್ ಜೋಡಣೆ ಮಾಡಬಹು ದಾಗಿತ್ತು. ಆದರೆ ಅಂದು ಜೋಡಣೆ ಮಾಡದೇ ಏಕಾಏಕಿ ಶುಲ್ಕ ವಿಧಿಸಿ ಜೋಡಣೆಗೆ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಕವಿತಾ ಚಂದ್ರಶೇಖರ್, ಶುಭಮಂಗಳ, ರಾಜೇಶ್ವರಿ, ರಾಕೇಶ್ ಮತ್ತಿತರರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಬಿ.ಹೆಚ್. ಮಲ್ಲೇಶಪ್ಪ, ಟಿ.ರಮೇಶ್, ಎಸ್.ರವಿ, ಅಲೆಕ್ಸಾಂಡರ್, ನವೀನ್ ನಲವಡಿ, ಶಾಮನೂರು ಕುಮಾರ್, ಆರೋಗ್ಯ ಸ್ವಾಮಿ, ಮೊಟ್ಟೆ ದಾದಾಪೀರ್, ಸುನೀತಾ ಭೀಮಣ್ಣ, ಅನ್ನಪೂರ್ಣಮ್ಮ ಮತ್ತಿತರರಿದ್ದರು.