ರಾಗಿ ಖರೀದಿ ಕೇಂದ್ರ ತೆರೆಯಲು ರೈತ ಸಂಘ ಪ್ರತಿಭಟನೆ

ರಾಗಿ ಖರೀದಿ ಕೇಂದ್ರ ತೆರೆಯಲು ರೈತ ಸಂಘ ಪ್ರತಿಭಟನೆ

ದಾವಣಗೆರೆ, ಮಾ.24- ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ವತಿಯಿಂದ ರಾಗಿ ಖರೀದಿ ಕೇಂದ್ರ ತೆರೆಯಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾ ಯಿಸಿ ನಗರದ ಗಾಂಧೀ ವೃತ್ತದಿಂದ ಜಿಲ್ಲಾಧಿ ಕಾರಿ ಕಚೇರಿವರೆಗೆ ಕಾಲ್ನಡಿಗೆ ಮುಖಾಂತರ ಬಹಿರಂಗ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಕರಿಬಸಪ್ಪ ಎ.ಆರ್ ಮಾತನಾಡಿ, ರೈತರು ದಾವಣಗೆರೆ ತಾಲ್ಲೂಕಿನಲ್ಲಿ ಮುಂಗಾರು 200 ಹೆಕ್ಟೇರ್‌, ಹಿಂಗಾರು 700 ಹೆಕ್ಟೇರ್‌, ಬೇಸಿಗೆ 100 ಹೆಕ್ಟೇರ್‌ ಒಟ್ಟು 1000 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಿದ್ದು, ಸರಾಸರಿ 3 ಸಾವಿರ ಟನ್ ಇಳುವರಿ ಬರುವ ನಿರೀಕ್ಷೆಯಿದೆ. ಜಿಲ್ಲೆಯ 6 ತಾಲ್ಲೂಕಿನಲ್ಲಿಯೂ ರೈತರು ರಾಗಿ ಬೆಳೆ ಬೆಳೆದಿದ್ದಾರೆ. ಸಿರಿಧಾನ್ಯದಲ್ಲಿ ಪ್ರಧಾನ ಸ್ಥಾನ ಪಡೆದಿರುವ ರಾಗಿ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ಸರ್ಕಾರ ಖರೀದಿ ಕೇಂದ್ರ ತೆರೆಯದೇ ಅಮಾಯಕ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿ, ನಷ್ಟಕ್ಕೆ ತಳ್ಳುವ ಪ್ರಯತ್ನ ಮಾಡಿದೆ ದೂರಿದರು.

ರೈತರಿಂದ ರಾಗಿ ಖರೀದಿ ಮಿತಿಯನ್ನು 20 ರಿಂದ 50 ಕ್ವಿಂಟಾಲ್‌ಗೆ ಹೆಚ್ಚಿಸಬೇಕು. ಬಿಪಿಎಲ್‌ ಕಾರ್ಡ್‌ದಾರರಿಗೆ 75 ಯೂನಿಟ್ ಉಚಿತ ವಿದ್ಯುತ್‌ ಹಾಗೂ ವಾಹನ ಖರೀದಿಗೆ 3.5 ಲಕ್ಷ ಸಬ್ಸಿಡಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಪರಿಶಿಷ್ಟರಿಗೆ ಮಾತ್ರ ಸೀಮಿತ ಎಂಬಂತೆ 75 ಯೂನಿಟ್ ಉಚಿತ ವಿದ್ಯುತ್‌ ಮತ್ತು ವಾಹನ ಖರೀದಿ ಸಹಾಯಧನ ನೀಡಲಾಗುತ್ತಿದೆ. ಬಿಪಿಎಲ್‌ ಕಾರ್ಡ್ ಹೊಂದಿರುವ ಎಲ್ಲಾ ಬಡವರಿಗೂ ಯೋಜನೆ ವಿಸ್ತರಿಸುವಂತೆ ಒತ್ತಾಯಿಸಿದರು.

ರೈತರು ಪಹಣಿ ಪಡೆಯಲು ಹಿಂದೆ 10 ರೂ. ಶುಲ್ಕ ನಿಗದಿ ಪಡಿಸಲಾಗಿತ್ತು. ಆದರೆ, ದಿಢೀರನೆ 10 ರೂ.ಗಳಿಂದ 25 ರೂ.ಗಳಿಗೆ ಹೆಚ್ಚಿಸಿರುವುದನ್ನು ಖಂಡಿಸಿದ ಅವರು, ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಿಲ್ಲೆಯ ರೈತರಿಗೆ ಸಿಗಬೇಕಾಗಿರುವ ಸೌಲಭ್ಯ ದೊರಕಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

ಇದೇ ಏಪ್ರಿಲ್‌ 1 ರೊಳಗಾಗಿ ಖರೀದಿ ಕೇಂದ್ರ ತೆರೆಯದಿದ್ದರೆ ಮುಂದಿನ ದಿನಗಳಲ್ಲಿ ರೈತರಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾ ಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಆಲೂರು ಮಂಜಪ್ಪ ಬಿ.ಸಿ, ಪರಮೇಶ್ವರಪ್ಪ ಬುಳ್ಳಾಪುರ, ಬಿ.ಸಿ ದೇವೇಂದ್ರಪ್ಪ, ಚಿಕ್ಕಗಂಗೂರು ಮಹೇಶ್ವರಪ್ಪ, ಕೊರಟಿಗೆರೆ ಜಯಣ್ಣ, ಕೆಂಪಣ್ಣ, ಸಿದ್ದೇಶ್, ಶಿವರಾಮಪ್ಪ, ಗಂಗಾಧರ್‌, ಹನುಮಂತಪ್ಪ ಮತ್ತಿತರರಿದ್ದರು.

error: Content is protected !!