ಪುಟ್ಟರಾಜರ ಜನ್ಮದಿನವನ್ನು `ಕಲಾ ವಿಕಾಸ ದಿನ’ವನ್ನಾಗಿಸಿ

ಪುಟ್ಟರಾಜರ ಜನ್ಮದಿನವನ್ನು `ಕಲಾ ವಿಕಾಸ ದಿನ’ವನ್ನಾಗಿಸಿ

ಮುಂಡರಗಿ, ಮಾ.20- ಪಂಡಿತ  ಪುಟ್ಟ ರಾಜರ ಜನ್ಮ ದಿನ ಮಾರ್ಚ್ 3ರಂದು, `ಕಲಾ ವಿಕಾಸ’ ದಿನವನ್ನಾಗಿ   ಸರ್ಕಾರ  ಆಚರಿಸಬೇಕು ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ  ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ)  ಒತ್ತಾಯಿಸಿದರು. 

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಮೊನ್ನೆ ಆಯೋಜಿಸಲಾಗಿದ್ದ  `ಪಂ. ಪುಟ್ಟರಾಜ -ಉತ್ಸವ’ ವನ್ನು  ಉದ್ಘಾಟನೆ ಮಾಡಿ ಅವರು ಮಾತನಾಡಿದರು. 

ಪುಟ್ಟರಾಜ ಸೇವಾ ಸಮಿತಿಯಿಂದ ವಚನ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡು ಆಧುನಿಕ ವಚನಕಾರರಿಗೆ ವೇದಿಕೆ ನೀಡಲು ಯೋಚಿಸಿದ್ದೇವೆ. ಆಧುನಿಕ ವಚನಕಾರರಲ್ಲಿ ಬಹು ಎತ್ತರದ ಸ್ಥಾನ ದಲ್ಲಿರುವ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳೇ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗ ಬೇಕು ಎಂದು ಅಭಿಪ್ರಾಯಪಟ್ಟರು. 

ಉತ್ಸವದ ಸಾನಿಧ್ಯವನ್ನು ವಹಿಸಿ,  ಆಶೀರ್ವಚನ ನೀಡಿದ ನಾಡೋಜ ಡಾ. ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು, `ಡಾ. ಪಂ. ಪುಟ್ಟರಾಜ ಉತ್ಸವ’ ಬದಲಾಗಿ `ಪಂಚಾಕ್ಷರಿ ಪುಟ್ಟರಾಜ ಉತ್ಸವ’ ಆಚರಿಸಬೇಕು ಎಂದು ಹೇಳಿದರು. 

ನೇತೃತ್ವ ವಹಿಸಿಕೊಂಡಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಡಾ. ಕಲ್ಲಯ್ಯ ಅಜ್ಜನವರು ಮಾತನಾಡಿ, ಪಂ. ಪುಟ್ಟರಾಜ ಕವಿ ಗವಾಯಿಗಳವರ ಜಯಂತಿಯನ್ನು ಕಲಾ ವಿಕಾಸ ದಿನಾಚರಣೆಯಾಗಿ ಆಚರಿಸಬೇಕು ಎನ್ನುವ ಪುಟ್ಟ ರಾಜ ಸೇವಾ ಸಮಿತಿಯ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು. 

ರೇವಣಸಿದ್ದಯ್ಯ ಹಿರೇಮಠ ಚಿಂಚೋಳಿ, ಡಾ. ಸುಮಾ ಹಡಪದ ಹಳಿಯಾಳ, ಡಾ. ನಿಂಗೂ ಸೊಲಗಿ ಮುಂಡರಗಿ, ಡಾ. ಪಿ. ಬಿ. ಹಿರೇಗೌಡರ್ ಮುಂಡರಗಿ, ಮಳ್ಳಪ್ಪ ಮಾಸ್ಟರ್ ಗುಡಿಸಲಮನಿ ಗುಡ್ಡದ ಬೂದಿಹಾಳ, ಸಂಗೀತ ಗುರು, ರೇವಣಸಿದ್ದಪ್ಪ ಎಂ. ಕೆ. ದಾವಣಗೆರೆ ಅವರುಗಳಿಗೆ ಡಾ. ಪಂ. ಪುಟ್ಟರಾಜ ಕೃಪಾ ಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.  

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳೆಯರಿಂದ ಪೂರ್ಣ ಕುಂಭ, ಅಕ್ಕನ ಬಳಗ ದವರಿಂದ ಆರತಿ ಮತ್ತು ವಾದ್ಯ ವೈಭವಗಳಿಂದ ಪೂಜ್ಯ ಪುಟ್ಟರಾಜ ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಕೋಶಾಧ್ಯಕ್ಷ, ಮುಂಡರಗಿ ಪುರಸಭೆಯ ಸದಸ್ಯ ನಾಗೇಶ್ ಹುಬ್ಬಳ್ಳಿ ವಹಿಸಿದ್ದರು.

ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಕರಿಬಸಪ್ಪ ಹಂಚಿನಾಳ, ಡಾ ಭೀಮಸಿಂಗ್ ರಾಥೋಡ್, ಪ್ರಕಾಶ್ ಹೊಸಮನಿ, ದಾವಣಗೆರೆಯ ಪಿ. ಬಿ. ವಿನಾಯಕ, ಕಲಾವಿದ ಮಹಿಬೂಬ್ ಸಾಬ್ ಬೆಟಗೇರಿ, ಮಲ್ಲಿಕಾರ್ಜುನ ಕುಂಬಾರ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಮಂಜುನಾಥ ಹಳ್ಳೂರ ಮಠ ಮತ್ತಿತರರು ಉಪಸ್ಥಿತರಿದ್ದರು.

ಕು. ನಕ್ಷತ್ರ ಹಡಪದ ಸಂಗಡಿಗರು ಪ್ರಾರ್ಥನಾ ಸಂಗೀತ ನಡೆಸಿಕೊಟ್ಟರು. ಮಂಜುನಾಥ್ ಮುಧೋಳ್ ಸ್ವಾಗತಿಸಿದರು. ಶಿವು ವಾಲೀಕಾರ ವಂದಿಸಿದರು. ಕಲಾವಿದ ಬಸವರಾಜ್ ನೆಲಜರಿ ಹಾಗೂ ನಿರ್ಮಲ ಶೇರವಾಡೆ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!