ಸಮಾಜದಲ್ಲಿನ ಬದಲಾವಣೆಗೆ ರಾಜಕೀಯವೊಂದೇ ಪರಿಹಾರ ಅಲ್ಲ

ಸಮಾಜದಲ್ಲಿನ ಬದಲಾವಣೆಗೆ ರಾಜಕೀಯವೊಂದೇ ಪರಿಹಾರ ಅಲ್ಲ

ಪ್ರೊ. ಬಿ.ಕೃಷ್ಣಪ್ಪ ಮೈತ್ರಿ ವನದಲ್ಲಿ ನಡೆದ `ಮಾನವ ಬಂಧುತ್ವ ಅನನ್ಯತೆಗಳು’ ಕಾರ್ಯಾಗಾರದಲ್ಲಿ ಸತೀಶ್ ಜಾರಕಿಹೊಳಿ ಅಭಿಮತ

ಮಲೇಬೆನ್ನೂರು, ಮಾ.13- ಸಮಾಜದಲ್ಲಿನ ಬದಲಾವಣೆಗೆ ರಾಜಕೀಯ ಒಂದೇ ಪರಿಹಾರ ಅಲ್ಲ ಎಂದು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಸೋಮವಾರ ಹರಿಹರ ಬೈಪಾಸ್ ಬಳಿ ಇರುವ ಪ್ರೊ. ಬಿ.ಕೃಷ್ಣಪ್ಪ ಮೈತ್ರಿವನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ `ಮಾನವ ಬಂಧುತ್ವದ ಅನನ್ಯತೆ’ ಕುರಿ ತಾದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಕನಕದಾಸರು, ವಾಲ್ಮೀಕಿ, ಬುದ್ದ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಮತ್ತಿತರೆ ಮಹಾನ್ ವ್ಯಕ್ತಿಗಳ ಮಾದರಿಯಲ್ಲಿ ನಾವು ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು. ಆ ಹಿನ್ನೆಲೆಯಲ್ಲಿ ನಾವು ಮಾನವ ಬಂಧುತ್ವ ವೇದಿಕೆ ಮೂಲಕ ವಿವಿಧ ರೀತಿಯ ತರಬೇತಿ ಕಾರ್ಯಾಗಾರಗಳನ್ನು ರಾಜ್ಯದ ನಾಲ್ಕು ಭಾಗಗಳಲ್ಲಿ ನಡೆಸುತ್ತಿದ್ದು, ಮಧ್ಯ ಕರ್ನಾಟಕದ ಜನರಿಗಾಗಿ `ಪ್ರೊ. ಬಿ.ಕೃಷ್ಣಪ್ಪ ಮೈತ್ರಿವನ’ದ ಜವಾಬ್ದಾರಿಯನ್ನು ನಾವು ವಹಿಸಿಕೊಂಡು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡುತ್ತಿದ್ದೇವೆ.

ಬರುವ ಏಪ್ರಿಲ್ 1 ರಿಂದ ಇಲ್ಲಿ ತರಬೇತಿಗಳನ್ನು ಆರಂಭಿಸುತ್ತೇವೆ. ತರಬೇತಿಗೆ ಬರುವ ವಿದ್ಯಾರ್ಥಿಗಳಿಗೆ ಊಟ, ವಸತಿಯ ಎಲ್ಲಾ ಅಗತ್ಯ ಸೌಲಭ್ಯಗಳನ್ನು ನಾವೇ ಭರಿಸುತ್ತೇವೆ. ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ವ್ಯವಸ್ಥೆ ಕುರಿತಾಗಿ ನಾವು ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದು, ಈಗಾಗಲೇ ನಮ್ಮ ತರಬೇತಿಗಳಿಂದಾಗಿ ಸಾವಿರಾರು ಯುವಕರಿಗೆ ಉದ್ಯೋಗಗಳು ಸಿಕ್ಕಿವೆ ಮತ್ತು ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಪರಿವರ್ತನೆಗಾಗಿ ಕೆಲಸ ಮಾಡುವ ಯುವಕರೂ ನಮ್ಮ ತಂಡದಲ್ಲಿದ್ದಾರೆ ಎಂದು ಜಾರಕಿಹೊಳಿ ತಿಳಿಸಿದರು.

ಇತಿಹಾಸ ತಿಳಿದುಕೊಳ್ಳದವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ. ಹಾಗಾಗಿ ನಾವು ಇಂದಿನ ಯುವ ಜನತೆಗೆ ಸಮಾಜದಲ್ಲಿ ಬದಲಾವಣೆ ತಂದವರ ಹಾಗೂ ದೇಶಕ್ಕಾಗಿ ಹೋರಾಟ ಮಾಡಿದವರ ಬಗ್ಗೆ ತಿಳಿಸುವ ಕೆಲಸ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಅಂತಹ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಎಲ್ಲಾ ಕಡೆ ನಿರ್ಮಿಸಿ, ಅವರ ಬಗ್ಗೆ ತಿಳಿಸುವ ಪ್ರಯತ್ನ ಇದೆ. ದೇಶದಲ್ಲಿ ಇತಿಹಾಸ ತಿರುಚುವ ಕೆಲಸ ಸದ್ದಿಲ್ಲದೇ ನಡೆಯುತ್ತಿದ್ದು, ಈ ಬಗ್ಗೆ ಜನರು ಜಾಗೃತರಾಗಿ ಹೋರಾಟ ಮಾಡಬೇಕಿದೆ ಎಂದು ಸತೀಶ್ ಜಾರಕಿಹೊಳಿ ಎಚ್ಚರಿಸಿದರು.

ನಾವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ರಾಜ್ಯದ ಪ್ರತಿಯೊಂದು ತಾಲ್ಲೂಕಿನ ಒಂದು ಅಥವಾ ಎರಡು ಶಾಲೆಗಳಿಗೆ ಡೆಸ್ಕ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯಕ್ರಮ ಆರಂಭಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಾರಕಿಹೊಳಿ ರಾಜ್ಯದ ಜನತೆಗೆ ತಿಳಿಸಿದ್ದಾರೆ.

ಮೈತ್ರಿ ವನದ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಟ್ರಸ್ಟಿ ಹನಗವಾಡಿ ರುದ್ರಪ್ಪ ಮಾತನಾಡಿ, ಪ್ರೊ. ಬಿ.ಕೃಷ್ಣಪ್ಪ ಅವರ ಆಶಯಗಳನ್ನು ಹೊಂದಿರುವ ಸತೀಶ್ ಜಾರಕಿಹೊಳಿ ಅವರು ನಾಡು ಕಂಡ ಅಪರೂಪದ ವ್ಯಕ್ತಿಯಾಗಿದ್ದು, ಅವರಿಂದಾಗಿ ಸಮಾಜದಲ್ಲಿ ಸ್ವಲ್ಪಮಟ್ಟಿನ ಬದಲಾವಣೆಯನ್ನು ನಾವು ಕಾಣಲು ಸಾಧ್ಯವಿದೆ ಎಂಬ ಉದ್ದೇಶದಿಂದ ನಮ್ಮ ಮೈತ್ರಿವನದ ಜವಾಬ್ದಾರಿಯನ್ನು ಅವರಿಗೆ ಸಂತೋಷದಿಂದ ನೀಡಿದ್ದೇವೆ ಎಂದರು.

ವೇದಿಕೆಯ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ರಾಜ್ಯ ವ್ಯಾಪ್ತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.

ವೇದಿಕೆಯ ವಿಭಾಗೀಯ ಸಂಚಾಲಕ ಅನಂತ್‌ ನಾಯ್ಕ ಮಾತನಾಡಿ, ದೇಶದಲ್ಲೇ ಇದೊಂದು ವಿಭಿನ್ನ ವೇದಿಕೆಯಾಗಿದ್ದು, ಇದರಿಂದ ಖಂಡಿತವಾಗಿಯೂ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂಬುದನ್ನು ನಾವು ಸಾಧಿಸಿ ತೋರಿಸೋಣ ಎಂದರು.

ವಿಧಾನಸಭೆಯ ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ, ಮಾಜಿ ಉಪಸ ಭಾಪತಿ ಮನೋಹರ ತಹಶೀಲ್ದಾರ್, ಶಾಸಕ ಎಸ್.ರಾಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಜಿ.ಪಂ. ಮಾಜಿ ಸದಸ್ಯ ಎ.ಗೋವಿಂದರೆಡ್ಡಿ, ಜಿ.ಪಂ. ಮಾಜಿ ಸದಸ್ಯರಾದ ಕೆ.ಪಿ.ಪಾಲಯ್ಯ, ಹೊದಿಗೆರೆ ರಮೇಶ್, ಮುಖಂಡರಾದ ಬಿ.ವೀರಣ್ಣ, ಎಂ.ಟಿ.ಸುಭಾಶ್ಚಂದ್ರ, ಜಿಗಳಿ ಆನಂದಪ್ಪ, ಸಣ್ಣ ತಮ್ಮಪ್ಪ ಬಾರ್ಕಿ, ನಂದಿಗಾವಿ ಶ್ರೀನಿವಾಸ್, ಎಂ.ಬಿ.ಅಬೀದ್ ಅಲಿ, ಪಾರ್ವತಿ, ಇಂದಿರಾ, ವಿದ್ಯಾ, ಸಾಬೀರ್ ಅಲಿ, ಕೊಕ್ಕನೂರು ಸೋಮಶೇಖರ್, ಉಕ್ಕಡಗಾತ್ರಿ ಮಂಜು, ರಾಘು ದೊಡ್ಮನಿ, ಹಬೀಬ್, ಸಂತೋಷ್ ನೋಟದ್, ತೊಳಿ ಭರಮಣ್ಣ, ಇರ್ಫಾನ್, ಜಿಗಳಿಯ ಡಿ.ಮಂಜುನಾಥ್, ಕೆ.ಜಿ.ಬಸವರಾಜ್, ಪತ್ರಕರ್ತ ಪ್ರಕಾಶ್ ಮತ್ತಿತರರು ಭಾಗಹಿಸಿದ್ದರು.

error: Content is protected !!