ಜನರನ್ನು, ಶಾಸಕರನ್ನು ನಿರ್ಲಕ್ಷಿಸಿದ್ದೇ ಸಮ್ಮಿಶ್ರ ಸರ್ಕಾರ ಹೋಗಿ ಭ್ರಷ್ಟ ಬಿಜೆಪಿ ಸರ್ಕಾರ ಬರಲು ಕಾರಣ

ಜನರನ್ನು, ಶಾಸಕರನ್ನು ನಿರ್ಲಕ್ಷಿಸಿದ್ದೇ ಸಮ್ಮಿಶ್ರ ಸರ್ಕಾರ ಹೋಗಿ ಭ್ರಷ್ಟ ಬಿಜೆಪಿ ಸರ್ಕಾರ ಬರಲು ಕಾರಣ

ರಾಣೇಬೆನ್ನೂರು, ಮಾ.13- ಜನರ, ಶಾಸಕರ ಕಷ್ಟ-ಸುಖ ವಿಚಾರ ಮಾಡಿದ್ದರೆ, ಸಮ್ಮಿಶ್ರ ಸರ್ಕಾರ ಹೋಗ್ತಿರಲಿಲ್ಲ. ಅವರನ್ನು ಅಲಕ್ಷ್ಯ ಮಾಡಿದ್ದರಿಂದ ಸರ್ಕಾರ ಹೋಗಿ ಈ ಭ್ರಷ್ಟ ಸರ್ಕಾರ ಆಡಳಿತಕ್ಕೆ ಬಂದಿತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಉರ್ದು ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಕುಮಾರಸ್ವಾಮಿ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಕುಳಿತು ಮುಖ್ಯಮಂತ್ರಿ ಸ್ಥಾನವನ್ನು ವೈಯಕ್ತಿಕವಾಗಿ ಮಜಾ ಮಾಡಲು ಉಪಯೋಗಿಸಿಕೊಳ್ಳದೇ, ವಿಧಾನಸೌಧದಲ್ಲಿ ಕುಳಿತು  ಜನಪರ ಆಡಳಿತ ನಡೆಸಿದ್ದರೆ, ಅವರು ಐದು ವರ್ಷ ಮುಖ್ಯಮಂತ್ರಿಗಳಾಗಿರುತ್ತಿದ್ದರು. ಆದರೆ, ಕುಮಾರಸ್ವಾಮಿ ಅವರ ಚಟುವಟಿಕೆ ಗಳನ್ನು ಹೊಂಚು ಹಾಕಿ ಕಾಯ್ದುಕೊಂಡಿದ್ದ ಬಿಜೆಪಿ ಆಪರೇಷನ್ ಕಮಲ ಮಾಡಿತು ಎಂದು ಸಿದ್ದರಾಮಯ್ಯ ಹೇಳಿದರು.

ಗುತ್ತಿಗೆದಾರರ ಪತ್ರ, ಗುತ್ತಿಗೆದಾರ ಸಂತೋಷ ಪಾಟೀಲ ಹಾಗೂ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಭ್ರಷ್ಟ ಆಡಳಿತಕ್ಕೆ ಸಾಕ್ಷಿಗಳಾಗಿವೆ. ವಿಧಾನಸೌಧದ ಗೋಡೆಗೆ ಕಿವಿ ಕೊಟ್ಟು ನಿಂತರೆ, ಕೇವಲ ಲಂಚದ ಬಗ್ಗೆ ಮಾತುಗಳು ಕೇಳಿಬರುತ್ತವೆ. ಹೋಟೆಲ್‌ ಗಳಲ್ಲಿ ತಿಂಡಿಗಳ ದರಪಟ್ಟಿ ಇರುವಂತೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಯಾರಿಗೆ ಎಷ್ಟು ಎನ್ನುವ ದರಪಟ್ಟಿ ಸಿಗಲಿದೆ ಎಂದು ಸಿದ್ದರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು.

ಸ್ವಾತಂತ್ರ್ಯ ಬಂದಂದಿನಿಂದ ತಮ್ಮ ಸರ್ಕಾರದ  ಅವಧಿವರೆಗೆ  ರಾಜ್ಯದ ಮೇಲೆ ಎರಡೂವರೆ ಸಾವಿರ ಕೋಟಿಯಷ್ಟಿದ್ದ ಸಾಲ ಈಗಿನ ಬಿಜೆಪಿಯ 4 ವರ್ಷದ ಆಡಳಿತದಲ್ಲಿ ಆರು ಸಾವಿರ ಕೋಟಿಯಷ್ಟಾಗಿದೆ. ಪ್ರತಿ ತಿಂಗಳು ನಾವು ಕಟ್ಟುವ ಅಸಲು ಹಾಗೂ ಬಡ್ಡಿ 50 ಸಾವಿರ ಕೋಟಿಯಷ್ಟಾಗುತ್ತದೆ. ಹೀಗಾದರೆ ದೇಶ ಉಳಿಯಲು ಸಾಧ್ಯವಾ ? ಇಂತವರಿಗೆ ಮತ ನೀಡುತ್ತೀರಾ?  ಎಂದು ನೆರೆದ ಜನರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ವೇದಿಕೆಯಲ್ಲಿ ಮುಖಂಡರುಗಳಾದ ಕೆ.ಬಿ.ಕೋಳಿವಾಡ, ಸಲೀಂ ಅಹ್ಮದ್, ಜಮೀರ್ ಅಹ್ಮದ್, ಪ್ರಕಾಶ್ ರಾಠೋಡ, ಬಸವರಾಜ ಶಿವಣ್ಣನವರ, ಸತೀಶ್‌ ಜಾರಕಿಹೊಳಿ, ಡಿ.ಆರ್.ಪಾಟೀಲ, ಐ.ಜಿ.ಸನದಿ,  ತಾಲ್ಲೂಕು ಅಧ್ಯಕ್ಷ ಮಂಜನಗೌಡ ಪಾಟೀಲ, ನಗರದ ಶೇರು ಕಾಬೂಲಿ, ಟಿಕೆಟ್ ಆಕಾಂಕ್ಷಿಗಳಾದ ಪ್ರಕಾಶ ಕೋಳಿವಾಡ, ಡಾ. ಪ್ರವೀಣ ಖನ್ನೂರ, ಜಟ್ಟೆಪ್ಪ ಕರೇಗೌಡ, ಕೊಟ್ರೇಶ್‌ ಬಸೇಗಣ್ಣಿ ಮತ್ತಿತರರಿದ್ದರು.

error: Content is protected !!