ಮಹಿಳೆಯರಿಲ್ಲದ ಪ್ರಪಂಚ ನಶ್ವರ, ಅವರ ರಕ್ಷಣೆ ನಮ್ಮೆಲ್ಲರ ಹೊಣೆ

ಮಹಿಳೆಯರಿಲ್ಲದ ಪ್ರಪಂಚ ನಶ್ವರ,  ಅವರ ರಕ್ಷಣೆ ನಮ್ಮೆಲ್ಲರ ಹೊಣೆ

ರಾಣೇಬೆನ್ನೂರು, ಮಾ.9- ಮಹಿಳೆಯೊಬ್ಬಳೇ ಭೂಮಿ ತಾಯಿಗೆ ಸಮಾನ, ಅವಳಿಲ್ಲದ ಅರೆಕ್ಷಣವನ್ನು ಊಹಿಸಿಕೊಳ್ಳಲಿಕ್ಕೆ ಈ ಸಮಾಜದಿಂದ ಸಾಧ್ಯವಿಲ್ಲ. ಅವಳು ದೈವೀ ಸ್ವರೂಪಿಣಿ, ಅವರನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್.ಪಾಟೀಲ ಹೇಳಿದರು.

ಬುಧವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಾಣೇಬೆನ್ನೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ರಾಜ್ಯ ರೈತ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಣ್ಣು, ಹಂಪಲ ಹಂಚಿ ಅವರು ಮಾತನಾಡಿದರು.

ಮಹಿಳೆ ಅಮ್ಮನಾಗಿ, ಅಕ್ಕನಾಗಿ, ತಂಗಿಯಾಗಿ, ಹೆಂಡತಿಯಾಗಿ ಕುಟುಂಬದ ಆಧಾರ ಸ್ತಂಭವಾಗಿ ಕುಟುಂಬವನ್ನು ಮುನ್ನಡೆಸುವ ರೀತಿ ಅಗಾಧ. ಒಬ್ಬ ಸುಸಂಸ್ಕೃತ ಮಹಿಳೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕಠಿಣ ಕಾನೂನು ಜಾರಿಯಾಗಬೇಕಾಗಿದೆ ಎಂದರು.

ಆಸ್ಪತ್ರೆಯ ವೈದ್ಯರಾದ ಡಾ.ರಾಜೇಶ್ವರಿ ಕದರಮಂಡಲಗಿಯವರ ಪ್ರಾಮಾಣಿಕ ಕರ್ತವ್ಯವನ್ನು ಸ್ಮರಿಸಿದ ಪಾಟೀಲರು ಬಡ ಗರ್ಭಿಣಿಯರಿಗೆ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಡಾ.ಅಕ್ಷತಾ, ಡಾ.ಚಂಪಾ ಗಡಾದ, ಡಾ.ವಾಣಿಯವರ ಕಾರ್ಯದಕ್ಷತೆಯನ್ನು ಮೆಚ್ಚಿದರು.

ಈ ಸಂದರ್ಭದಲ್ಲಿ ಬಸವರಾಜ ಕೊಂಗಿಯವರ, ಹರಿಹರಗೌಡ ಎಸ್.ಪಾಟೀಲ, ಗುಡ್ಡಪ್ಪ ಮಣಕೂರ, ಡಾಕೇಶ ಲಮಾಣಿ ಮತ್ತಿತರರಿದ್ದರು.

error: Content is protected !!