ಕನ್ನಡ ಕಟ್ಟಿ ಬೆಳೆಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು

ಕನ್ನಡ ಕಟ್ಟಿ ಬೆಳೆಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು

ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೇಕರ್‌

ದಾವಣಗೆರೆ, ಮಾ.8- ಮಕ್ಕಳಿಗೆ ತಾಯಿಯೇ ಮೊದಲ ಶಿಕ್ಷಕಿ ಬಾಲ್ಯಾವಸ್ಥೆಯಲ್ಲಿ ತಾಯಿ ಯಾವ ಭಾಷೆ ಕಲಿಸುತ್ತಾಳೋ ಅದೇ ಭಾಷೆಯನ್ನೇ ಮಗು ತನ್ನ ಭಾಷೆಯೆಂದು ಭಾವಿಸುತ್ತದೆ. ಹಾಗಾಗಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕೆಂದು ಹಿರಿಯ ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮನವಿ ಮಾಡಿದರು.

ಸುವರ್ಣ ಕರ್ನಾಟಕ ವೇದಿಕೆಯು ತಾಲ್ಲೂಕಿನ ಗೋಣಿವಾಡದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗ್ರಾಮೀಣ ಮಾತೆಯರ ಕನ್ನಡ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ತಾಯಂದಿರು ಆಂಗ್ಲ ಭಾಷೆಯ ವ್ಯಾಮೋಹದಿಂದ ಹೊರ ಬರಬೇಕು. ಪ್ರತಿ ಗ್ರಾಮಗಳಲ್ಲಿ ಇಂಗ್ಲಿಷ್ ಕಾನ್ವೆಂಟ್ ಶಾಲೆಗಳು ನಾಯಿ ಕೊಡೆಗಳಂತೆ ಉದ್ಭವವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ ಕುತ್ತು ಬಂದಿದೆ. ಈ ಕೆಟ್ಟ ಬೆಳವಣಿಗೆಗೆ ಕನ್ನಡ ಅನ್ನದ ಭಾಷೆ ಅಲ್ಲ ಎಂದು ತಪ್ಪು ಕಲ್ಪನೆ ಪೋಷಕರಲ್ಲಿದೆ. ಇದರಿಂದ ಕನ್ನಡ ಶಾಲೆಗಳು ಸೊರಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಮಾತೆಯರನ್ನು ಕನ್ನಡ ಭಾಷಾ ಶಿಕ್ಷಣದ ಕಡೆ ಒಲವು ಮೂಡಿಸಲು ಆಯೋಜಿಸಿರುವ ಹೊಸ ಬದಲಾವಣೆ ತರಲಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ಕನ್ನಡ ನಾಡು-ನುಡಿಗಾಗಿ ಹೋರಾಟ ನಡೆಸುವ ಸಂಘಟನೆಗಳು ಅತ್ಯಗತ್ಯವೆನಿಸಿದರೆ ಹೋರಾಟದ ಮೂಲಕ ಕನ್ನಡ ಕಟ್ಟಬಹುದು. ಈ ರೀತಿ ಹೊಸ ಆಲೋಚನೆಗಳ ಮೂಲಕ ಮಾತೆಯರಲ್ಲಿ ಜಾಗೃತಿ ಮೂಡಿಸಿ, ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮ ಶಿಕ್ಷಣವನ್ನು ಉತ್ತೇಜಿಸಬೇಕಾಗಿದೆ ಎಂದರು.

ಕಾರ್ಯಕ್ರಮ ಆಯೋಜಿಸಲು ಸುತ್ತಮುತ್ತಲಿನ ಜನರು ನೀಡಿರುವ ಬೆಂಬಲ ಅವಿಸ್ಮರಣೀಯವಾದದ್ದು. ಕನ್ನಡ ಅಳಿಯುವ ಭಾಷೆಯಲ್ಲ, ಅದನ್ನು ಬೆಳೆಸಬೇಕಾದ ಹೊಣೆಗಾರಿಕೆ ಕನ್ನಡಿಗರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ಲಯನ್ಸ್ ವಾಸುದೇವ ರಾಯ್ಕರ್, ರಾಜ್ಯ ಉಪಾಧ್ಯಕ್ಷ ಹೆಚ್.ಪರಶುರಾಮ್, ನಮ್ಮ ಜೈ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ನಾಗರಾಜಪ್ಪ, ಮಂಜುನಾಥ ಎನ್.ಎಂ., ಅನಂತಲಕ್ಷ್ಮಿ, ಬಸವರಾಜ್, ಅಂಜಿ ನಪ್ಪ, ಹನುಮಂತಪ್ಪ, ಬಸವರಾಜಯ್ಯ, ರುದ್ರಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ವಿಶ್ವನಾಥ್ ಸ್ವಾಗತಿಸಿದರು.

error: Content is protected !!