`ಇನ್ಪೋಸೈಟ್’ ಸಾಫ್ಟ್‍ವೇರ್ ಕಂಪನಿ ಉದ್ಘಾಟಿಸಿದ ಸಂಸದ ಸಿದ್ದೇಶ್ವರ
ದಾವಣಗೆರೆ, ಮಾ. 6- ಕೆಲವೇ ವರ್ಷಗಳಲ್ಲಿ ದಾವಣಗೆರೆ ಸಾಫ್ಟ್‌ವೇರ್ ಹಬ್ ಆಗಿ ವಿಶ್ವದ ಗಮನ ಸೆಳೆಯುವ ಕಾಲ ದೂರವಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಜೆ.ಹೆಚ್.ಪಟೇಲ್ ಬಡಾವಣೆಯ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಕಟ್ಟಡದಲ್ಲಿರುವ ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್‍ನಲ್ಲಿ `ಇನ್ಪೋಸೈಟ್’ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆಯವರೇ ಆದ ವೀರೇಶ್ ಬೆಳ್ಳೂಡಿ ಜಿಲ್ಲೆಯ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ನಗರದಲ್ಲಿ ಸಾಫ್ಟ್‌ವೇರ್ ಕಂಪನಿ ತೆರೆಯಲು ಮುಂದೆ ಬಂದಿರುವುದು ಸಂತೋಷದಾಯಕ ವಿಚಾರ. ಈಗ ಕಂಪನಿ ನೂರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕೊಡಲು ಮುಂದೆ ಬಂದಿದೆ. ಮುಂಬರುವ ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ನೇಮಕಾತಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಸದ್ಯ ಎಸ್.ಟಿ.ಪಿ.ಐ ಕೇಂದ್ರದಲ್ಲಿ ನೂರು ಜನರು ಕುಳಿತು ಕೆಲಸ ಮಾಡುವ ಅವಕಾಶವಿದ್ದು, ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ದೊಡ್ಡಬಾತಿ ಬಳಿ ಇರುವ ಜಂಕ್ಷನ್ ಹತ್ತಿರ ಮೂರು ಎಕರೆ ಜಮೀನಿದ್ದು, ಅಲ್ಲಿ ಎಸ್.ಟಿ.ಪಿ.ಐ. ಕೇಂದ್ರಕ್ಕೆ ಅಗತ್ಯ ಕಟ್ಟಡ ನಿರ್ಮಾಣ ಮಾಡಲು ಎಲ್ಲಾ ರೀತಿಯಿಂದಲೂ ಪ್ರಯತ್ನ ನಡೆಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ವೈ.ವೃಷಭೇಂದ್ರಪ್ಪ, ವರ್ಚ್ಯುಯಲ್ ಮೂಲಕ ವಿದೇಶಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಂಪನಿಯ ಇತರೆ ಪಾಲುದಾ ರರಿಗೆ ಸಾಫ್ಟ್‌ವೇರ್ ಕಂಪನಿಗಳನ್ನು ತೆರೆಯಲು ಸೂಕ್ತವಾಗಿರುವ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಇನ್ಪೋಸೈಟ್ ಕಂಪನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ವೀರೇಶ್ ಬೆಳ್ಳೂಡಿ, ಪ್ಲೇಸ್‍ಮೆಂಟ್ ಅಧಿಕಾರಿ ಶ್ರೀಮತಿ ಶೃತಿ, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್, ಪಾಲಿಕೆ ಸದಸ್ಯ ಪ್ರಸನ್ನಕುಮಾರ್, ಎಸ್.ಟಿ.ಪಿ.ಐ. ಜಂಟಿ ನಿರ್ದೇಶಕ ಶಶಿಕುಮಾರ್, ಶಿವಾನಂದಪ್ಪ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿದ್ದರು.