ಸಂಗೀತ ಲೋಕಕ್ಕೆ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ

ಸಂಗೀತ ಲೋಕಕ್ಕೆ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ

ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಜಯಂತ್ಯುತ್ಸವದಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ಮಾ.3- ಸಂಗೀತ ಸಾರಸ್ವತ ಲೋಕಕ್ಕೆ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಕೊಡುಗೆ ಅಪಾರವಾದದ್ದು ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀಗುರು ಪುಟ್ಟರಾಜ ನಗರದಲ್ಲಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 264ನೇ ಹೋಳಿ ಹುಣ್ಣಿಮೆಯ ಶಿವಾನುಭವ ಗೋಷ್ಠಿ, ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ 109ನೇ ಜಯಂತ್ಯುತ್ಸವ ಮತ್ತು ಸಂಗೀತ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪಂ.ಪುಟ್ಟರಾಜ ಗವಾಯಿಗಳು  ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಜನಮಾನಸದ  ಹೃದಯ ಸಿಂಹಾಸನಾರೂಢವಾಗಿ ನೆಲೆಸಿದ್ದಾರೆ. ತಮ್ಮ ತಪಸ್ಸಿನ ಶಕ್ತಿಯಿಂದ ಗದ್ದುಗೆಯಲ್ಲಿದ್ದೇ ತಮ್ಮನ್ನು ನಂಬಿರುವ ಭಕ್ತರಿಗೆ ಆಶೀರ್ವದಿಸುವ ಮೂಲಕ ಮನಸಂಕಲ್ಪ ಗಳನ್ನು ಈಡೇರಿಸುತ್ತಿದ್ದಾರೆ ಎಂದು ಹೇಳಿದರು.

ಧರ್ಮದ ಮೌಲ್ಯಗಳನ್ನು ಮೈಗೂಡಿಸಿ ಕೊಂಡಾಗ ಮನುಷ್ಯ ಮಹದೇವನಾಗುತ್ತಾನೆ. ಈ ಹಿನ್ನೆಲೆಯಲ್ಲಿ ಧರ್ಮದ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬುದು ಪಂ.ಪುಟ್ಟರಾಜ ಗವಾಯಿಗಳವರ ಉದ್ದೇಶವಾಗಿತ್ತು ಎಂದರು.

ಅವರು ನಡೆದಾಗುವ ದೇವರಾಗಿ, ಸಾರಸ್ವತ ಲೋಕದ ರಸಋಷಿಗಳಾಗಿ, ತಪಯೋಗಿಗಳಾಗಿ 97 ವರ್ಷಗಳ ಕಾಲ ಲಕ್ಷಾಂತರ ಭಕ್ತರಿಗೆ, ಅಂದ ಕಲಾವಿದರ ಬಾಳಿಗೆ ಬೆಳಕಾಗಿದ್ದರು. ನಾಡಿಗೆ ಅವರ ಕೊಡುಗೆ ಅನನ್ಯವಾದದ್ದು ಎಂದು ಹೇಳಿದರು.

ನಾಲ್ಕು ಭಾಷೆಗಳಲ್ಲಿ ಪುರಾಣ, ದಾರ್ಶನಿಕರ ಚರಿತ್ರೆ ಬರೆದಿದ್ದ ಗವಾಯಿಗಳು, ಕಣ್ಣಿಲ್ಲದಿದ್ದರೂ ತಮ್ಮ ಕಾರುಣ್ಯದ ಮೂಲಕ ಮನುಕುಲದ ಕಣ್ಣು ತೆರೆಸಿದ ಮಹಾನ್ ಪುರುಷರು ಎಂದು ಬಣ್ಣಿಸಿದರು.

ಗದಗ, ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿನ ಈ ಮೂರು ಆಶ್ರಮಗಳು ಪುಟ್ಟರಾಜ ಗವಾಯಿಗಳ ಮೂರು ಕಣ್ಣುಗಳಿದ್ದಂತೆ. ತಮ್ಮ  ಬಳಿ ಬರುವುದಕ್ಕಿಂತ ಅಂಧ ಜನರಿಗೆ ಸಹಾಯ ಮಾಡುವಂತೆ ಪುಟ್ಟರಾಜ ಗವಾಯಿಗಳು ಕರೆ ನೀಡಿದ್ದರು. 

ಈ ಹಿನ್ನೆಲೆಯಲ್ಲಿ ಎಲ್ಲಿಯೇ ಆಗಲಿ ಅಂಧರ ಬಾಳಿಗೆ ಬೆಳಕಾಗುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ, ಗೋಪಿನಾಯ್ಕ, ಶಿವಮೊಗ್ಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಆರ್.ಬಿ. ಸಂಗಮೇಶ್ವರ ಗವಾಯಿಗಳು ಉಪಸ್ಥಿತರಿದ್ದರು.

ಶಿವಬಸವಸ್ವಾಮಿ ಚರಂತಿಮಠ ನಿರೂಪಿಸಿದರು. ಅಜ್ಜಂಪುರ ಶೆಟ್ರು ಮೃತ್ಯುಂಜಯ  ಸ್ವಾಗತಿಸಿದರು.

error: Content is protected !!