ರಾಣೇಬೆನ್ನೂರು, ಮಾ.2- ತಾಲ್ಲೂಕು ಪಂಚಾಯತಿ ಮತ್ತು ನಗರಸಭೆಯಂಥ ಆಡಳಿತ ಶಕ್ತಿ ಕೇಂದ್ರಗಳು ಅಕ್ರಮ ಚಟುವಟಿಕೆಗಳಿಗೆ ಅಂಕುಶ ಹಾಕುತ್ತಾ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಬೇಕು ಎಂದು ಮೆಣಸಿನಹಾಳ ತಿಮ್ಮನ ಗೌಡರ ಅಭಿಮಾನಿ ಬಳಗದ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.
ಮಿನಿ ವಿಧಾನಸೌಧದಲ್ಲಿ ನಡೆದ ಹುತ್ಮಾತ್ಮ, ಸ್ವಾತಂತ್ರ್ಯ ಸೇನಾನಿ ಮೆಣಸಿನಹಾಳ ತಿಮ್ಮನಗೌಡರ 80ನೇ ಪುಣ್ಯಾರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುತಾತ್ಮರ ಜೀವನ ಚರಿತ್ರೆ ಜನಸಾಮಾನ್ಯರಿಗೆ ತಿಳಿಯುವಂತಾಗಲು ಜಿಲ್ಲಾಡಳಿತ ಮತ್ತು ತಾಲ್ಲೂಕಾಡಳಿತ ಆದಷ್ಟು ಕ್ರಮ ಕೈಗೊಳ್ಳುವುದರ ಜೊತೆಗೆ ಮೆಣಸಿನಹಾಳ ತಿಮ್ಮನಗೌಡ ಪಾಟೀಲರ ಪುತ್ಥಳಿಯ ಪಕ್ಕ ಪಾರ್ಕ್ ನಿರ್ಮಿಸಿ, ಶೌಚಾಲಯ ಕಟ್ಟುವಂತಹ ಅಸಹ್ಯ ಕಾರ್ಯಕ್ರಮದ ರೂವಾರಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದರು.
ಶ್ರೀ ಶನೈಶ್ವರ ಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಮಾಜಿ ಸಚಿವ ಆರ್. ಶಂಕರ್, ನಮಯುಗದ ಸಂತೋಷ ಪಾಟೀಲ, ನ್ಯಾಯವಾದಿ ಕೆ.ಎನ್. ಕೋರಧಾನ್ಯ ಮಠ, ಜಿ.ಪಂ. ಮಾಜಿ ಸದಸ್ಯರಾದ ಮಂಗಳಗೌರಿ ಪೂಜಾರ, ವಕೀಲರಾದ ಆರ್.ಜೆ. ಪಾಟೀಲ, ಜಿ.ಎಸ್. ಶಾಂತನರ, ಶೇಖರ ಬಣಕಾರ, ಶಾಂತನಗೌಡ ಪಾಟೀಲ, ಬಸವರಾಜ ಕೊಂಗಿ, ನಿತ್ಯಾನಂದ ಕುಂದಾಪುರ, ಜೆ.ಎಂ. ಮಠದ ಮುಂತಾದವರು ಉಪಸ್ಥಿತರಿದ್ದರು. ಬಿ.ಕೆ. ರಾಜನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸುಧಾ ಪಾಟೀಲ ವಂದಿಸಿದರು.