ದಾವಣಗೆರೆ, ಮಾ.1- ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಮಾಜದ ಅಸ್ತಿತ್ವ ಉಳಿಸಲು ಪೀಠ ಸ್ಥಾಪನೆ ಅವಶ್ಯಕವಾಗಿದೆ ಎಂದು ಶಿರಸಂಗಿ ಕಾಳಿಕಾ ದೇವಸ್ಥಾನ ಅಧ್ಯಕ್ಷ ಪಿ.ಬಿ.ಬಡೀಗೆರ್ ಹೇಳಿದರು.
ಬುಧವಾರ ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಇಂದು ಹಮ್ಮಿಕೊಂಡಿದ್ದ ವಿಶ್ವಕರ್ಮ ಗುರುಪೀಠ ಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದ ಕಲೆ, ಸಂಸ್ಕೃತಿ, ಧಾರ್ಮಿಕ ಅಸ್ತಿತ್ವ ಉಳಿಸಲು ಗುರುಪೀಠದ ಅವಶ್ಯಕತೆ ಇದೆ. ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ದಿ ಹೊಂದಲು ಮಠಾಧೀಶರ ಮಾರ್ಗದರ್ಶನ ಮುಖ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಸ್ಥಾಪನೆಯಾಗುವ ವಿಶ್ವಕರ್ಮ ಗುರುಪೀಠ ಇಡೀ ವಿಶ್ವಕರ್ಮ ಸಮಾಜವನ್ನ ಪ್ರತಿನಿಧಿ ಸುವ ಪೀಠವಾಗಿದೆ. ಭವಿಷ್ಯದ ದಿನಮಾನಗಳಲ್ಲಿ ಸಮಾಜಕ್ಕೆ ಭದ್ರ ಬುನಾದಿ ಬೇಕಾಗಿದ್ದು, ಅಭಿವೃದ್ಧಿಪರ ಆಲೋಚನೆ ಹೊಂದಿ ಗುರುಪೀಠ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಹುಬ್ಬಳಿಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಿ.ಪಿ ಮಾಯಾಚಾರ್ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ವಿಶ್ವಕರ್ಮ ಸಮಾಜದ ಅಸ್ಮಿತೆಯಾದ ಪಂಚವೃತ್ತಿ, ಶಿಲ್ಪಕಲೆ ಉಳಿಸಿ ಬೆಳೆಸಲು ಶ್ರಮಿಸಬೇಕು. ಸಮಾಜದಲ್ಲಿ ಏಕತೆಯ ಕೊರತೆ ಯಿದ್ದು, ಸೂಕ್ತ ಮಾರ್ಗದರ್ಶನಕ್ಕಾಗಿ ಪೀಠ ಸ್ಥಾಪಿಸಿರುವುದು ಸಂತೋಷದ ವಿಷಯವಾಗಿದೆ ಎಂದರು.
ಜಿಲ್ಲಾ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ವಿ ಶಿವಾನಂದ ಮಾತನಾಡಿ, ಸಮಾಜದ ಓರೆಕೋರೆ ತಿದ್ದಲು ಗುರುವಿನ ಮಾರ್ಗದರ್ಶನದ ಅವಶ್ಯಕತೆಯಿದೆ. ವಿಶ್ವಕರ್ಮರ ಸಂಸ್ಕೃತಿ, ಪರಂಪರೆ, ವೃತ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೇಂದ್ರಚಾರ್ ಬಸಾಪುರ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷ ಬಿ.ಎಲ್ ಸಿದ್ದರಾಮಚಾರ್, ನಿರ್ದೇಶಕ ಬಿ.ಪಿ ಜಗನ್ನಾಥ್, ಹೊನ್ನಾಳಿ ಅಧ್ಯಕ್ಷ ಶಾಂತಚಾರ್, ಜಗಳೂರು ಅಧ್ಯಕ್ಷ ಗುರುಸಿದ್ದ ಚಾರ್, ನಿವೃತ್ತ ಪ್ರಾದ್ಯಪಕ ಸೀತಾರಾಮ ಚಾರಿ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.