ಭೌತಿಕ ಸಂಪತ್ತಿಗಿಂತ ಬೌದ್ಧಿಕ ಸಂಪತ್ತಿನ ದಾಹ ಶ್ರೇಷ್ಠ

ಭೌತಿಕ ಸಂಪತ್ತಿಗಿಂತ ಬೌದ್ಧಿಕ ಸಂಪತ್ತಿನ ದಾಹ ಶ್ರೇಷ್ಠ

ಗಂಗನರಸಿಯ ಧಾರ್ಮಿಕ ಸಭಾದಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ

ಹರಿಹರ, ಫೆ.20- ಮಾನವ ಕುಲದ ಭಯಶೋಕಗಳಿಗೆ ಭೌತಿಕ ಸಂಪತ್ತಿನ ದಾಹವೇ ಕಾರಣವಾಗಿದ್ದು, ಇದರ ಬದಲಾಗಿ ಬೌದ್ಧಿಕ ಸಂಪತ್ತನ್ನು ಅರಸಿ ಹೋದಲ್ಲಿ ಆನಂದ ಪ್ರಾಪ್ತಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು.

ಹರಿಹರ ತಾಲ್ಲೂಕು ಗಂಗನರಸಿಯ ಶ್ರೀ ಗೋಣಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹರಿಹರ ಹಾಗೂ ಕೆ.ಆರ್.ನಗರ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಮಹಾಲಕ್ಷ್ಮಿ ಪೂಜಾ ಧಾರ್ಮಿಕ ಸಭೆಯ ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಲಕ್ಷ್ಮಿ ಎಂದರೆ ಐಹಿಕ ಸಂಪತ್ತು ಎಂದು ಭಾವಿಸುವವರೇ ಹೆಚ್ಚು. ಆದರೆ, ಲಕ್ಷ್ಮಿಯನ್ನು ಜ್ಞಾನ ಸಂಪತ್ತಿನ ಪ್ರದಾತೆ ಎಂಬುದಾಗಿ ಭಾವಿಸಿ, ಪೂಜಿಸಿದಲ್ಲಿ ನಮ್ಮಲ್ಲಿನ ಮೋಹವು ದೂರಾಗುತ್ತದೆ. 

ಐಹಿಕ ಸಂಪತ್ತು ಇಲ್ಲವಾದಾಗ ದುಃಖವಾಗುತ್ತದೆ. ಅದು ಬಂದಾಗ ಚೋರ, ಭಯ, ತೆರಿಗೆ ಭಯ ಉಂಟಾಗುತ್ತದೆ. ಮೋಹವು ದೂರಾದಾಗ ಭಯ ಶೋಕಗಳು ಇಲ್ಲವಾಗುತ್ತವೆ. ಭಯಶೋಕಗಳು ದೂರವಾದಾಗ ಆನಂದ ಪ್ರಾಪ್ತಿಯಾಗುತ್ತದೆ. ಈ ಆನಂದ ಪ್ರಾಪ್ತಿಗೋಸ್ಕರವೇ ಲಕ್ಷ್ಮಿ ಪೂಜೆಯೆಂದು ಭಾವಿಸಿ ಮಾಡಿದಲ್ಲಿ ಸಾರ್ಥಕ್ಯ ಹೆಚ್ಚು ಎಂದು ಅವರು ಸ್ವಾರಸ್ಯಕರ ಉದಾಹರಣೆಗಳ ಸಹಿತ ಹೇಳಿದರು. 

ವೇದ ಕಾಲದಿಂದಲೂ ಸ್ತ್ರೀಶಕ್ತಿಗೆ ಪ್ರಾಶಸ್ತ್ಯ ಕೊಟ್ಟ ಭಾರತದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೂ ಸೃಷ್ಟಿ, ಸ್ಥಿತಿ ಲಯಕಾರಕ ಸಾಮರ್ಥ್ಯಗಳು ಅವರ ಹೆಂಡತಿಯರಿಂದಲೇ ಪ್ರಾಪ್ತವಾಗಿದ್ದು, ಎಂದರಲ್ಲದೇ, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.

 ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟಿನ ಹಿರಿಯ ಜಿಲ್ಲಾ ನಿರ್ದೇಶಕರಾದ ವಿಜಯ ಕುಮಾರ ನಾಗನಾಳ ಅವರು  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.           

ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಹರಪನಹಳ್ಳಿ ತಾಲ್ಲೂಕು ನಿಚ್ಚವ್ವನಹಳ್ಳಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ, ಆರ್ಥಿಕ ಸಬಲತೆಯೊಂದಿಗೆ ಸಂಸ್ಕೃತಿಯ ಸಬಲತೆ ಹಾಗೂ ಸಮೃದ್ಧತೆಯೂ ಅತ್ಯವಶ್ಯ, ಪೋಷಕರು ಮೊಬೈಲ್ ಕಡೆ ಗಮನ ಕೊಡದೇ, ಮಕ್ಕಳ ಓದಿನ ಕಡೆ ಗಮನ ಕೊಡಬೇಕು. ಸಮಾನತೆಯಲ್ಲಿ ಬಾಳುತ್ತಾ ಸಮಗ್ರವಾಗಿ ವಿಚಾರ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು. 

ಧರ್ಮದರ್ಶಿ ಮಲ್ಲಿಕಾರ್ಜುನಯ್ಯನವರ ಅಧ್ಯಕ್ಷತೆಯಲ್ಲಿ  ಯೋಜನಾಧಿಕಾರಿ ಗಣಪತಿ ಮಾಳಂಜೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು. ಬಿ.ಮೃತ್ಯುಂಜಯ ನಿರೂಪಿಸಿದರು. 

ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಶುಭಾ, ಸುಧಾ, ಕೊಂಡಜ್ಜಿಯ ಹನುಮಂತಪ್ಪ, ಮಠದ ನಾಗೇಂದ್ರಪ್ಪ, ಹೊನ್ನಪ್ಪ, ಬಣಕಾರ್ ಮಹದೇವಪ್ಪ, ರುದ್ರಗೌಡ್ರು, ಅಣ್ಣಪ್ಪ, ಅಖಿಲ್ ಸಾಬ್, ಸವಿತಾ, ನಾಗರಾಜ, ಆನಂದಪ್ಪ, ಭಾರತೀ ಮುಂತಾದವರು ಭಾಗವಹಿಸಿದ್ದರು.

ಪತ್ರಕರ್ತ ಹಾಗೂ ಕಲಾವಿದ ಅಣ್ಣಪ್ಪ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.  

error: Content is protected !!