ದಾವಣಗೆರೆ, ಫೆ. 19 – ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಎಲೆಬೇತೂರಿನ ಈಶ್ವರೀಯ ಗೀತಪಾಠ ಶಾಲೆ ಸಹಯೋಗದೊಂದಿಗೆ ಮಹಾಶಿವರಾತ್ರಿ ಕಾರ್ಯಕ್ರಮ ನಡೆಯಿತು.
ಎಲೆಬೇತೂರು ಗ್ರಾಮದ ತರಳಬಾಳು ಶಾಲೆಯ ಅಧ್ಯಕ್ಷ ಹೆಚ್. ಬಸವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ, ಶಿವರಾತ್ರಿಯ ದಿವ್ಯ ಸಂದೇಶ ತಿಳಿಸಿದರು.
ಪರಮ ಜ್ಯೋತಿ ಸ್ವರೂಪನಾದ ಪರಮಾತ್ಮ ಶಿವ ಈ ಅಂಧಕಾರದ ಜಗತ್ತಿನಲ್ಲಿ ಪುನಃ ಅವತರಿತನಾಗಿ ದ್ದಾನೆ. ಈ ಪೃಥ್ವಿಯ ಮೇಲಿನ ಮನುಷ್ಯಾತ್ಮರೆಲ್ಲರೂ ಪ್ರೀತಿಯಿಂದ ಅವನನ್ನು ನೆನೆದಾಗ ಸುಖ-ಶಾಂತಿಯನ್ನು ಅವನಿಂದ ಪಡೆ ಯಲು ಸಾಧ್ಯ ಎಂದು ಪ್ರತಿಪಾದಿಸಿದರು.
ಮಹಾಶಿವರಾತ್ರಿಯ ಉಪವಾಸದ ಬಗ್ಗೆ ವಿವರಿಸಿದ ಲೀಲಾಜಿ, ಉಪ ಎಂದರೆ ಹತ್ತಿರ, ವಾಸ ಎಂದರೆ ನೆಲೆಸು ಎಂದರ್ಥ. ನಮ್ಮ ಮನಸ್ಸು ಬುದ್ಧಿಯಿಂದ ಪರಮಾತ್ಮನ ಸಮೀಪ ಇರುವುದೇ ನಿಜವಾದ ಉಪವಾಸ.
ಮಹಾ ಶಿವರಾತ್ರಿಯ ಸಮಯದಲ್ಲಿ ಮೂರು ದಳದ ಬಿಲ್ಪತ್ರೆ ಯನ್ನು ಶಿವ ಪರಮಾತ್ಮನಿಗೆ ಅರ್ಪಿಸಲಾಗುತ್ತದೆ. ಇದು ಮನ-ವಚನ-ಕರ್ಮದಿಂದ ನಾವು ಪರಮಾತ್ಮನಿಗೆ ಸಮ ರ್ಪಣೆ ಮಾಡುವುದು ಎಂದು ಸೂಚಿಸುತ್ತದೆ. ಜಾಗರಣೆ ಅಂದರೆ ಕೆಟ್ಟಗುಣ ಮತ್ತು ಅಜ್ಞಾನವು ನಮ್ಮಲ್ಲಿ ಪ್ರವೇಶಿಸ ದಂತೆ ಜಾಗೃತಿಗೊಳಿಸುವುದೇ ನಿಜವಾದ ಜಾಗರಣೆ. ನಾವು ಪಾಪ ಕರ್ಮಗಳಿಗೆ ಬಲಿಯಾಗುವುದು ಬೇಡ; ಏಕೆಂದರೆ, ಇವೆ ನಮಗೆ ದುಃಖವನ್ನು ನೀಡುತ್ತವೆ, ಕೆಟ್ಟ ಪದಗಳು ನಾಲಿಗೆ ಮೇಲೆ ಬಾರದಿರಲಿ. ನಮ್ಮ ಚಲನ ವಲನಗಳ ಮೇಲೆ ಸದಾ ಗಮನ ನೀಡುವುದೇ ಜಾಗರಣೆ. ಈ ರೀತಿಯಾಗಿ ನಾವೆಲ್ಲರೂ ಸತ್ಯ ಶಿವರಾತ್ರಿಯನ್ನು ಅರ್ಥಪೂ ರ್ಣವಾಗಿ ಆಚರಿಸೋಣ ಎಂದು ಕರೆ ನೀಡಿದರು.
ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ ಬಸನಗೌಡ್ರು ಕಲಪನಹಳ್ಳಿ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಮ ವಿರುಪಾಕ್ಷಪ್ಪ, ಗ್ರಾ.ಪಂ. ಸದಸ್ಯೆ ಶ್ರೀಮತಿ ಸೌಭಾಗ್ಯ, ಸಂಗನಗೌಡ್ರು, ಬಿ.ಕೆ. ದೇವಕ್ಕ, ಬಿ.ಕೆ. ದೇವೇಂದ್ರಪ್ಪ, ನಾಗರಕಟ್ಟೆ ಮರುಳಸಿದ್ದಪ್ಪ, ನಾಗರಾಜಯ್ಯ, ಪರಮೇಶಪ್ಪ ಇತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿವರಾತ್ರಿ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಹಾಗೂ ಶಿವಲಿಂಗದ ಮೆರವಣಿಗೆ ನಡೆಯಿತು. ಮೆರೆವಣಿಗೆಯಲ್ಲಿ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ತರಳಬಾಳು ಶಾಲೆಯ ಮಕ್ಕಳು ಡೊಳ್ಳುಕುಣಿತ ಆಕರ್ಷಣೀಯವಾಗಿತ್ತು. ಈ ಸಂದರ್ಭದಲ್ಲಿ ಎಲೆಬೇತೂರು, ಮೆಳ್ಳೆಕಟ್ಟೆ, ಆಲೂರು, ನಾಗರಕಟ್ಟೆ, ಕಲಪನಹಳ್ಳಿ, ಚಿಕ್ಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿರೂಪಣೆಯನ್ನು ಸೌಭಾಗ್ಯ ರಾಜಶೇಖರಪ್ಪ, ಪ್ರಾರ್ಥನೆಯನ್ನು ಕವಿತಾ, ಜಲಜಾಕ್ಷಿ, ಸ್ವಾಗತವನ್ನು ಸುಮಾ ಬಸವಂತಪ್ಪ, ವಂದನರ್ಪಣೆಯನ್ನು ಮಂಗಳಾ ಷಡಕ್ಷರಪ್ಪ ನೆರವೇರಿಸಿದರು.