ಹರಪನಹಳ್ಳಿ, ಫೆ.16- ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಶ್ರೀ ಸಂತ ಸೇವಾಲಾಲ್‍ರವರ 284ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಜಾರ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳಿಗೆ ನೀಡಲು 1100 ಹಕ್ಕು ಪತ್ರಗಳು ಸಿದ್ದಗೊಂಡಿವೆ. ಸಮಾಜದಲ್ಲಿ ಕೆಟ್ಟ ಭಾವನೆಗಳು ಹೆಚ್ಚಾದಾಗ ಸೇವಾಲಾಲ್ ನಂತಹ ಅನೇಕ ಮಹನೀಯರು ಜನ್ಮತಾಳಿ ಜನರಿಗೆ ಧರ್ಮದ ಅರಿವು ಮೂಡಿಸಿದ್ದಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಆ ಸಮುದಾಯದ ಅಭಿವೃದ್ಧಿಗೆ ಮುನ್ನುಡಿ ಬರೆದರು. ಬಂಜಾರ ಸಮುದಾಯದವರು ಕಾಯಕ ಜೀವಿಗಳಾಗಿದ್ದು, ಆ ಸಮುದಾಯದ ಅಭಿವೃದ್ಧಿಗೆ ತಾವು ಕೈಜೋಡಿಸುವುದಾಗಿ ಹೇಳಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಪಿ.ಎಲ್.ಪೋಮ್ಯನಾಯ್ಕ ಮಾತನಾಡಿ, ಯಡಿಯೂರಪ್ಪನವರ ಸರ್ಕಾರ ಸೂರಗೊಂಡನಕೊಪ್ಪದಲ್ಲಿ ತಾಂಡಾ ನಿಗಮ ಘೋಷಣೆ ಮಾಡಿ ಅಭಿವೃದ್ಧಿಗೆ ನಾಂದಿ ಹಾಡಿದರೆ, ಸಿದ್ದರಾಮಯ್ಯನವರ ಸರ್ಕಾರ ಸೇವಾಲಾಲ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ರೂಪಿಸಿತು. ಹರಪನಹಳ್ಳಿ ತಾಲ್ಲೂಕಿನಲ್ಲಿ ಅಂದು ಶಾಸಕರಾಗಿದ್ದ ಈಗಿನ ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕರವರು 6 ತಾಂಡಾಗಳನ್ನು ಈ ಹಿಂದೆಯೇ ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು, ಈವರೆಗೂ ಅಕ್ಕ ಪಕ್ಕದ ತಾಲೂಕಿನಲ್ಲಿ ತಾಂಡಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿಲ್ಲವೆಂದು ಹೇಳಿದರು.
ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವಾಲಾಲ್ ಮಹಾರಾಜರು ಭಾರತೀಯ ಅಧ್ಯಾತ್ಮಿಕ ನಾಯಕ ಹಾಗೂ ಬಂಜಾರ ಸಮುದಾಯದ ಸಂತ, ಸಂಸ್ಥಾಪಕ ಬಡ ಬಂಜಾರರ ಅಜ್ಞಾನ ದೂರ ಮಾಡಲು ಪ್ರಯತ್ನಿಸಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಶಿವಕುಮಾರ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ಎಡಿಎಲ್‍ಆರ್ ಬಳ್ಳಾರಪ್ಪ, ಸಮಾಜ ಕಲ್ಯಾ ಣಾಧಿಕಾರಿ ರೇಣುಕಾದೇವಿ, ಹಿಂದುಳಿದ ಇಲಾಖೆ ಕಲ್ಯಾಣಾಧಿಕಾರಿ ಮಂಜುಳಾ, ಅರಣ್ಯಾಧಿಕಾರಿ ಮಲ್ಲಪ್ಪ, ಪುರಸಭೆ ಸದಸ್ಯರಾದ ಎಂ.ಕೆ.ಜಾವೀದ್, ಇಸಿಓ ಕಬೀರನಾಯ್ಕ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಆರ್.ಲೋಕೇಶ್, ಶಿವಾನಂದ, ಎಲ್.ಬಿ.ಹಾಲೇಶನಾಯ್ಕ, ವಸಂತ ಪಾಟೀಲ್, ಸೇರಿದಂತೆ ಇತರರು ಇದ್ದರು.