ಹರಿಹರದಲ್ಲಿ `ತನುಜಾ’ ಚಿತ್ರ ; ಉಚಿತ ಪ್ರದರ್ಶನ

ಹರಿಹರದಲ್ಲಿ `ತನುಜಾ’ ಚಿತ್ರ ; ಉಚಿತ ಪ್ರದರ್ಶನ

ಹರಿಹರ, ಫೆ. 14-  ತಾಲ್ಲೂಕಿನ ಬಿಜೆಪಿ ಯುವ ನಾಯಕ ಚಂದ್ರಶೇಖರ್ ಪೂಜಾರ್ ಹನಗವಾಡಿ ಅವರ ನೇತೃತ್ವದಲ್ಲಿ ಬಿ.ಎಸ್. ಯಡಿಯೂರಪ್ಪ ಅಭಿಮಾನಿಗಳ ಬಳಗದ ವತಿಯಿಂದ ಇತ್ತೀಚೆಗೆ ಬಿಡುಗಡೆಯಾದ ತನುಜಾ ಚಿತ್ರವನ್ನು ಉಚಿತವಾಗಿ ವಿದ್ಯಾರ್ಥಿಗಳು, ಪೋಷಕರು, ಯುವ ಸಮೂಹ ಗ್ರಾಮೀಣ ರೈತ ಕುಟುಂಬದವರ ವೀಕ್ಷಣೆಗಾಗಿ ಆಯೋಜನೆ ಮಾಡಲಾಗಿದೆ.

ಈ ಕುರಿತು ಆಯೋಜಕ ಚಂದ್ರಶೇಖರ್ ಪೂಜಾರ್ ಮಾತನಾಡಿ, ತನುಜಾ ಚಲನಚಿತ್ರ ಪ್ರದರ್ಶನವು ನಗರದ ಶ್ರೀಕಾಂತ ಚಿತ್ರಮಂದಿರದಲ್ಲಿ ಫೆ. 10 ರಿಂದಲೇ ಆರಂಭಿಸಲಾಗಿದೆ. ಫೆ. 16ರವರೆಗೆ ಪ್ರತಿದಿನ ನಾಲ್ಕು ಪ್ರದರ್ಶನಗಳಲ್ಲಿ ಉಚಿತವಾಗಿ ನೋಡಬಹುದಾಗಿದೆ. ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ಚಿತ್ರ ವೀಕ್ಷಣೆ ಮಾಡಿದ್ದು, ಈ ಚಿತ್ರವನ್ನು ಎಲ್ಲರೂ ನೋಡಿ ಉಳಿದವರಿಗೆ ಪ್ರೇರೇಪಣೆಯಾಗಬೇಕೆಂದು ವಿನಂತಿಸಿದ್ದಾರೆ.

ನೈಜ ಘಟನೆಯನ್ನು ಆಧರಿಸಿ ಚಿತ್ರಿಸಲಾದ ತನುಜಾ ಚಿತ್ರವು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಲೇಖನ ಒಂದನ್ನು ಆಧರಿಸಿ ತಯಾರಿಸಿದ ಚಲನಚಿತ್ರವಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಸುಧಾಕರ್ ಅವರ ಕಾರ್ಯಕ್ಷಮತೆಯನ್ನು ಈ ಸಿನಿಮಾದ ಮೂಲಕ ತೋರಿಸಲಾಗಿದೆ. ಅವರದೇ ಪಾತ್ರಗಳನ್ನು ಅವರದೇ ನಟನೆಯಿಂದ ಚಿತ್ರಿಸಿರುವುದು ಈ ಚಿತ್ರದ ವಿಶೇಷವಾಗಿದೆ.

ಗ್ರಾಮೀಣ ಪ್ರದೇಶದ ತನುಜಾ ಎಂಬ ಯುವತಿಯು ನೀಟ್ ಪರೀಕ್ಷೆ ಬರೆದು ವೈದ್ಯೆಯಾಗುವ ಕನಸು ಹೊತ್ತು ಅಭ್ಯಾಸ ನಡೆಸಿರುತ್ತಾಳೆ. ಕೊರೊನಾ ಕಾರಣಕ್ಕಾಗಿ ಅವಳು ಪರೀಕ್ಷೆ ಬರೆಯಲು ಆಗದೇ ಇರುವ ಪ್ರಸಂಗ ಒದಗಿ ಬಂದಿರುತ್ತದೆ. ಈ ಘಟನೆಯನ್ನು ವಿಶ್ವೇಶ್ವರ ಭಟ್ ಅವರು ಅಂದಿನ ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿಶೇಷ ಕಾನೂನಿನಡಿ ಆಕೆಗೆ ಪರೀಕ್ಷೆಯನ್ನು ಬರೆಸಲಾಗುತ್ತದೆ. ಮುಂದೆ ಆಕೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೆಡಿಕಲ್ ಕೋರ್ಸಿಗೆ ಪ್ರವೇಶ ಪಡೆಯುತ್ತಾಳೆ. ಇಂತಹ ಒಳ್ಳೆಯ ಚಿತ್ರವನ್ನು ವಿದ್ಯಾ ರ್ಥಿಗಳು ಹಾಗೂ ಅವರ ಪೋಷಕರು ನೋಡಲೇ ಬೇಕಾದ ಕಾರಣಕ್ಕಾಗಿ ನಾನು ಒಂದು ವಾರಗಳ ಕಾಲ ನನ್ನದೇ ಸ್ವಂತ ಖರ್ಚಿನಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟಿರುತ್ತೇನೆ. ಇದರ ಲಾಭವನ್ನು ಹರಿಹರ ತಾಲ್ಲೂಕಿನ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ. ಇಂತಹದ್ದೊಂದು ಉತ್ತಮ ಚಿತ್ರವನ್ನು ತೆರೆಗೆ ತಂದ ನಿರ್ಮಾಪಕರಿಗೂ ಹಾಗೂ ನಿರ್ದೇಶಕರಿಗೂ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಚಂದ್ರಶೇಖರ್ ಪೂಜಾರ್ ತಿಳಿಸಿದರು.

error: Content is protected !!